Home Uncategorized ಉಡುಪಿ: ಮನೆ ಬಾಡಿಗೆ ವಿವಾದ : ಅಂಗಡಿ ಮಾಲೀಕನ ಮೇಲೆ ಆಸಿಡ್ ದಾಳಿ : ತಲವಾರ್...

ಉಡುಪಿ: ಮನೆ ಬಾಡಿಗೆ ವಿವಾದ : ಅಂಗಡಿ ಮಾಲೀಕನ ಮೇಲೆ ಆಸಿಡ್ ದಾಳಿ : ತಲವಾರ್ ದಾಳಿ ಯತ್ನ : ಆರೋಪಿ ಅರೆಸ್ಟ್

ಉಡುಪಿ: ಮನೆ ಬಾಡಿಗೆ ಮುಂಗಡ ಹಣದ ವಿವಾದ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರ ಮೇಲೆ ಆಸಿಡ್ ಎರಚಿ ತಲವಾರಿನಿಂದ ಕೊಲೆ ಯತ್ನ ನಡೆಸಿದ ಘಟನೆ ಉಡುಪಿ ನಗರದಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ.

ದೂರುದಾರ ನವೀನ್ ಕುಮಾರ್ (58), ಪ್ರಾಜ್ಞಾಯ 4ನೇ ಕ್ರಾಸ್, ಬುಡ್ನಾರು, ಕುಂಜಿಬೆಟ್ಟು, ಶಿವಳ್ಳಿ ಗ್ರಾಮದವರು. ಇವರು ಕಲ್ಕೂರು ಬಿಲ್ಡಿಂಗ್, ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಅಂಗಡಿ ನಡೆಸುತ್ತಿದ್ದಾರೆ. ಇವರ ವಿಷ್ಣುಮೂರ್ತಿ ನಗರದ ಮನೆಯ ಮೊದಲ ಮಹಡಿಯಲ್ಲಿ ಬಾಡಿಗೆದಾರನಾಗಿದ್ದ ಸುರೇಶ್ ಆಚಾರ್ಯ ಮನೆ ಖಾಲಿ ಮಾಡಿದ್ದರು. ಮನೆಗೆ 20 ಸಾವಿರ ಮುಂಗಡ ನೀಡಿದ್ದರು.

ಮನೆ ಪರಿಶೀಲಿಸಿದಾಗ ಗೋಡೆ, ಟ್ಯಾಪ್ ಹಾಳಾಗಿದ್ದರಿಂದ ಮುಂಗಡದಲ್ಲಿ 2 ತಿಂಗಳ ಬಾಡಿಗೆ ಹಾಗೂ ದುರಸ್ತಿ ವೆಚ್ಚ ಕಡಿತಗೊಳಿಸಿ ಕೊಡುವುದಾಗಿ ನವೀನ್ ಹೇಳಿದ್ದರು. ಇದಕ್ಕೆ ಒಪ್ಪದ ಸುರೇಶ್ ಆಚಾರ್ಯ ಪೂರ್ತಿ 20 ಸಾವಿರ ಕೊಡಬೇಕು ಎಂದು ಅ.23 ರಂದು ಅಂಗಡಿಗೆ ಬಂದು ಬೆದರಿಕೆ ಹಾಕಿ ಹೋಗಿದ್ದ.

ಅ.28 ರಂದು ಸಂಜೆ 3:30ಕ್ಕೆ ಕಲ್ಕೂರು ಬಿಲ್ಡಿಂಗ್‌ನ ಅಂಗಡಿಯಲ್ಲಿ ಕೆಲಸ ಮಾಡುವಾಗ ಸುರೇಶ್ ಆಚಾರ್ಯ ಬಂದು ಮುಂಗಡ ಹಣದ ವಿಚಾರದಲ್ಲಿ ಏರು ಧ್ವನಿಯಲ್ಲಿ ಜಗಳ ಮಾಡಿ, ಹೊರಗೆ ಹೋಗಿ ಸ್ಕೂಟರ್‌ನಿಂದ ಬಾಟಲಿ ಮತ್ತು ದೊಡ್ಡ ಕತ್ತಿ ತಂದಿದ್ದಾನೆ. “ಇದು ಆಸಿಡ್, ಇದನ್ನು ಹಾಕಿ ಸುಟ್ಟು ಕೊಂದು ಬಿಡುತ್ತೇನೆ, ಆಮೇಲೆ ಕತ್ತಿಯಿಂದ ಕಡಿದು ಹಾಕುತ್ತೇನೆ” ಎಂದು ಬೆದರಿಸಿ, ಕೊಲ್ಲುವ ಉದ್ದೇಶದಿಂದ ಮೈಮೇಲೆ ಆಸಿಡ್ ಎರಚಿದ್ದಾನೆ.

ಆಸಿಡ್ ದಾಳಿಯಿಂದ ನವೀನ್ ಕುಮಾರ್ ಅವರ ಬಲಗೈ, ಸೊಂಟ, ಹೊಟ್ಟೆ, ಪಾದ, ಮುಖ, ಎಡಗೈ ಸುಟ್ಟಿದೆ. ನಂತರ ಕತ್ತಿ ಹಿಡಿದು ಕಡಿಯಲು ಬಂದಾಗ ಅವರು ಅಡಗಿಕೊಂಡು ಪಾರಾಗಿದ್ದಾರೆ. ಗಾಯಗೊಂಡ ಅವರು KMC ಆಸ್ಪತ್ರೆಯ ಬರ್ನಿಂಗ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಅ.ಕ್ರ 147/2026 ಕಲಂ 124(1), 109 BNS ರಂತೆ ಪ್ರಕರಣ ದಾಖಲಾಗಿದೆ.

ಆರೋಪಿ ಬಂಧನ:
ಠಾಣಾ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದಲ್ಲಿ PSI ಭರತೇಶ್ ಕಂಕಣವಾಡಿ, HC ಪ್ರಸನ್ನ ಸಿ, ಲೋಕೇಶ್, ಅಬ್ದುಲ್ ಬಶೀರ್, PC ಹೇಮಂತ್ ಕುಮಾರ್, ಆನಂದ್ ಎಸ್, ಆನಂದಯ್ಯ, ಮಹಿಳಾ HC ನೇತ್ರಾವತಿ ಅವರ ತಂಡ ಕಾರ್ಯಾಚರಣೆ ನಡೆಸಿ, ಕೆಲವೇ ಗಂಟೆಗಳಲ್ಲಿ ಆರೋಪಿ ಸುರೇಶ್ ಆಚಾರ್ಯ (48), ಮನೋಳಿಗುಜ್ಜಿ, ಕುಂಜಿಬೆಟ್ಟು ನಿವಾಸಿ, ಪ್ರಸ್ತುತ MGM ಮೈದಾನ ಬಳಿ ಬಾಡಿಗೆ ಮನೆಯಲ್ಲಿ ವಾಸ, ಎಂಬಾತನನ್ನು ಶಿವಳ್ಳಿಯ MGM ಬಳಿ ವಶಕ್ಕೆ ಪಡೆದಿದೆ.

ಆರೋಪಿಯಿಂದ ಕೃತ್ಯಕ್ಕೆ ಬಳಸಿದ ಬಿಳಿ ಆಕ್ಟಿವಾ KA 20 EK 6450 ಮತ್ತು ತಲವಾರ್ ವಶಪಡಿಸಿಕೊಳ್ಳಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಿದೆ.

ಆರೋಪಿ ಮದ್ಯವ್ಯಸನಿಯಾಗಿದ್ದು, ಮನೆಯಲ್ಲೇ ಚಿನ್ನ-ಬೆಳ್ಳಿ ಕುಸುರಿ ಕೆಲಸ ಹಾಗೂ Swiggy ಡೆಲಿವರಿ ಬಾಯ್ ಆಗಿ ಪಾರ್ಟ್‌ಟೈಮ್ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.