Home Crime ಮಂಗಳೂರು: ಭಾಸ್ಕರ್ ಶೆಟ್ಟಿ ಹತ್ಯೆ ಆರೋಪಿಗಳ ಮೇಲೆ ಜೈಲಿನಲ್ಲಿ ಕೊಲೆ ಯತ್ನ ಪ್ರಕರಣ : 14...

ಮಂಗಳೂರು: ಭಾಸ್ಕರ್ ಶೆಟ್ಟಿ ಹತ್ಯೆ ಆರೋಪಿಗಳ ಮೇಲೆ ಜೈಲಿನಲ್ಲಿ ಕೊಲೆ ಯತ್ನ ಪ್ರಕರಣ : 14 ಮಂದಿ ದೋಷಿ…!!

ಮಂಗಳೂರು: ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿಗಳಾದ ನವನೀತ್ ಶೆಟ್ಟಿ ಮತ್ತು ಜ್ಯೋತಿಷಿ ನಿರಂಜನ್ ಭಟ್ ಮೇಲೆ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಯತ್ನ ಮತ್ತು ಸುಲಿಗೆ ನಡೆಸಿದ್ದ ಪ್ರಕರಣದಲ್ಲಿ 14 ಮಂದಿ ಆರೋಪಿಗಳು ದೋಷಿಗಳು ಎಂದು ಮಂಗಳೂರಿನ ತ್ವರಿತಗತಿ ನ್ಯಾಯಾಲಯ (Fast Track Court) ತೀರ್ಪು ನೀಡಿದೆ.

ದೋಷಿಗಳ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯವು ಸೆಪ್ಟೆಂಬರ್ 16ರಂದು ಪ್ರಕಟಿಸಲಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

2017ರ ಸೆಪ್ಟೆಂಬರ್ 11ರಂದು ಮಧ್ಯಾಹ್ನ 12:30ಕ್ಕೆ ಮಂಗಳೂರು ಜಿಲ್ಲಾ ಕಾರಾಗೃಹದ ಹೊಸ ಕಟ್ಟಡದ ‘ಬಿ’ ಬ್ಲಾಕ್ ವರಾಂಡದಲ್ಲಿ ಈ ದಾಳಿ ನಡೆದಿತ್ತು. ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ನವನೀತ್ ಮತ್ತು ನಿರಂಜನ್ ಭಟ್ ತಮ್ಮ ಕೇಸಿನ ಮುಂದಿನ ವಿಚಾರಣಾ ದಿನಾಂಕ ತಿಳಿಯಲು ಜೈಲರ್ ಕಚೇರಿಗೆ ತೆರಳುತ್ತಿದ್ದಾಗ, ಹಣದ ದುರುದ್ದೇಶದಿಂದ ಸಂಚು ರೂಪಿಸಿದ್ದ ಖೈದಿಗಳ ಗ್ಯಾಂಗ್ ದಾಳಿ ನಡೆಸಿತ್ತು.

ಆರೋಪಿಗಳು ಕೈ-ಕಾಲಿನಿಂದ ತುಳಿದು, ಪೈಪ್, ಸ್ಟೀಲ್ ಡ್ರಮ್, ಕ್ಯಾರಂ ಬೋರ್ಡ್‌ನಿಂದ ತಲೆ ಮತ್ತು ಬೆನ್ನಿಗೆ ಹೊಡೆದು ಗಾಯಗೊಳಿಸಿದ್ದರು. ಅಲ್ಲದೆ “ಭಾಸ್ಕರ್ ಶೆಟ್ಟಿ ಕೊಲೆ ಒಪ್ಪಿಕೊಳ್ಳಬೇಕು, ಇಲ್ಲದಿದ್ದರೆ ಲಕ್ಷ ರೂ. ತರಿಸಿಕೊಡಬೇಕು” ಎಂದು ಜೀವ ಬೆದರಿಕೆ ಹಾಕಿ ಸುಲಿಗೆಗೆ ಯತ್ನಿಸಿದ್ದರು ಎಂದು ಆರೋಪ ಪಟ್ಟಿ ಹೇಳಿದೆ. 3cff

ಕಿಶನ್ ಪೂಜಾರಿ ಕೊಡಕ್ಕಲ್, ಶಿವರಾಜ್, ಪುಷ್ಪರಾಜ್ @ ನಿತಿನ್ @ ನಿಶು ಪೂಜಾರಿ, ಲಾಯ್ ವೇಗಸ್, ಧನರಾಜ್ @ ಧನು, ವಿಖ್ಯಾತ್ ಕುಮಾರ್ @ ವಿಕ್ಕಿ, ಅವಿನಾಶ್ ಬಜಿಲಕೇರಿ, ಅಭಿಷೇಕ್, ಗೌರವ್ ಕಯ್ಯ @ ಪ್ರೀತಂ, ಗೌತಮ್, ರಾಜು @ ರಾಜೇಶ್, ಶರತ್ ಗಟ್ಟಿ, ಮಿಥುನ್ ಪೂಜಾರಿ, ಸಾಗರ್ ಪೂಜಾರಿ ವಿರುದ್ಧ ಆರೋಪ ಸಾಬೀತಾಗಿದೆ.

ಈ ಪ್ರಕರಣದಲ್ಲಿ ಇನ್ನೋರ್ವ ಆರೋಪಿ ಮುಕ್ತಾರ್ ತಲೆಮರೆಸಿಕೊಂಡಿದ್ದು, ಎಲ್‌ಪಿಸಿ ವಾರಂಟ್ ಜಾರಿಯಾಗಿದೆ, ಮತ್ತೋರ್ವ ಆರೋಪಿ ಅಕ್ಷಯ್ ಕುಮಾರ್ ಮೃತಪಟ್ಟಿದ್ದಾನೆ.