ಉಡುಪಿ: ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ(ಕಡಿಯಾಳಿ) ವತಿಯಿಂದ ಸೆ. ೧೪ರಿಂದ ೨೦ರ ತನಕ ಕಡಿಯಾಳಿ ಶ್ರೀಮಹಿಷರ್ಮನಿ ದೇವಸ್ಥಾನದ ಕಾತ್ಯಾಯನೀ ಮಂಟಪದಲ್ಲಿ ೬೦ನೇ ಶ್ರೀಗಣೇಶೋತ್ಸವ(ವಜ್ರ ಮಹೋತ್ಸವ) ನಡೆಯಲಿದೆ ಎಂದು ಸಮಿತಿ ಗೌರವಾಧ್ಯಕ್ಷ, ಉಡುಪಿ ಶಾಸಕ ಯಶಪಾಲ್ ಎ. ಸುವರ್ಣ ತಿಳಿಸಿದ್ದಾರೆ.
ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೆ. ೧೩ರಂದು ಸಂಜೆ ೪.೩೦ಕ್ಕೆ ಗಣಪತಿ ವಿಗ್ರಹದ ಮೆರವಣಿಗೆಗೆ ಜೋಡುಕಟ್ಟೆಯಲ್ಲಿ ಡಾ. ಟಿ. ಎಂ. ಎ. ಪೈ ಆಸ್ಪತ್ರೆಯ ವೈದ್ಯಕೀಯ ಅರಕ್ಷಕ ಡಾ. ಶಶಿಕಿರಣ್ ಉಮಾಕಾಂತ್ ಚಾಲನೆ ನೀಡಲಿದ್ದಾರೆ. ವಜ್ರ ಮಹೋತ್ಸವ ಕಾರ್ಯಕ್ರಮ ಏಳು ದಿನಗಳ ಕಾಲ ನಡೆಯಲಿದೆ ಎಂದರು.
ಭವ್ಯ ರಾಜ ದರ್ಬಾರ್ ವೇದಿಕೆ ನಿರ್ಮಾಣವಾಗಲಿದ್ದು ಮಂಟಪದಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಲಾಗುವುದು. ದರ್ಬಾರಿನಲ್ಲಿ ಗಣಪತಿ ಏಳು ದಿನಗಳ ಕಾಲ ರಾಜನಂತೆ ಮೆರೆಯಲಿದ್ದಾನೆ, ಭಕ್ತರನ್ನು ಅನುಗ್ರಹಿಸಲಿದ್ದಾನೆ. ಭವಿಷ್ಯದ ನೆಲೆಯಲ್ಲಿ ಯುವಜನತೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಲಾಗುವುದು.
ಭಕ್ತಿ, ಶ್ರದ್ಧೆಗೆ ಪ್ರಾಧಾನ್ಯ ನೀಡಿದ ಸಾಂಸ್ಕೃತಿಕ ಹಬ್ಬದಲ್ಲಿ ಯಾವುದೇ ಸಿನಿಮಾ ಗೀತೆಗಳಿಗೆ ಅವಕಾಶವಿಲ್ಲ. ಕಡಿಯಾಳಿಯನ್ನು ಸಂಪರ್ಕಿಸುವ ನಾಲ್ಕು ಕಡೆ ಸ್ವಾಗತ ಕಮಾನು ನಿರ್ಮಿಸಲಾಗಿದೆ. ಫ್ಲೆಕ್ಸ್, ಬ್ಯಾನರ್, ಕೇಸರಿ ಧ್ವಜ, ಬ್ಯಾನರ್ ಅಳವಡಿಸಲಾಗಿದೆ. ಬಟ್ಟೆ, ಲೈಟ್ ಅಲಂಕಾರವನ್ನೂ ಮಾಡಲಾಗಿದೆ.
ಸೆ. ೧೭ರಂದು ಆಹ್ವಾನಿತ ಕಲಾವಿದರ ಕುಣಿತ ಭಜನಾ ಸ್ಪರ್ಧೆ, ಬಹುಮಾನ ವಿತರಣೆ ಮಾಡಲಾಗುವುದು. ಸೆ. ೧೯ರಂದು ಉಡುಪಿ ನಗರದ ೧೦೦ಕ್ಕೂ ಅಕ ಗಣೇಶೋತ್ಸವ ಸಮಿತಿಗಳನ್ನು ಗುರುತಿಸಿ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಯನ್ನು ಗೌರವಿಸಲಾಗುವುದು .
ಸಮಾರೋಪ ಸಮಾರಂಭವು ಸೆ. ೨೦ರಂದು ನಡೆಯಲಿದೆ. ಚಿನ್ನದ ಕಿರೀಟ, ಪಾಶಾಂಕುಶ ಸಹಿತ ಅನೇಕ ಆಭರಣ ಹೊಂದಿದ ಗಣಪತಿ ಮೂರ್ತಿಯನ್ನು ಇಂದಿರಾ ನಗರದ ಎಂಜಿನಿಯರ್ ಸಂಪತ್ ರಾವ್ ರಚಿಸಿದ್ದಾರೆ. ಭಕ್ತರ ವಾಹನಗಳಿಗೆ ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆ, ಯು. ಕಮಲಾ ಬಾಯಿ ಪ್ರೌಢಶಾಲೆ, ಕುಂಜಿಬೆಟ್ಟು ಬಿಜೆಪಿ ಜಿಲ್ಲಾ ಕಚೇರಿ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಉಡುಪಿ ಜಿಲ್ಲೆಯ ಅತಿ ಹಿರಿಯ ಗಣಪತಿ ಸಮಿತಿಯು ಸುವರ್ಣ ಮಹೋತ್ಸವ(೫೦) ಕಾರ್ಯಕ್ರಮವನ್ನು ಸಾಮಾಜಿಕ ಚಿಂತನೆಯೊಂದಿಗೆ ರಾಜ್ಯಕ್ಕೆ ಮಾದರಿಯಾಗುವಂತೆ ರೂಪಿಸಿ ಜಾರಿಗೊಳಿಸಿದ್ದು ಮಾದರಿಯಾಗಿದೆ. ವಜ್ರ ಮಹೋತ್ಸವ ಅಂಗವಾಗಿಯೂ ಅನೇಕ ಸಾಮಾಜಿಕ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಪ. ವಸಂತ ಭಟ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ, ಗೀತಾ ಶೇಟ್, ವಜ್ರ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಗಿರೀಶ್ ಅಂಚನ್, ಸತೀಶ್ ಕುಲಾಲ್ ಉಪಸ್ಥಿತರಿದ್ದರು.





