ಶಿರ್ವ: ದೇವಸ್ಥಾನದ ಬೀಗ ಮುರಿದು ಒಳನುಗ್ಗಿದ ಕಳ್ಳರು ಎರಡು ದೇವರ ಮೂರ್ತಿಗಳಿಗೆ ತೊಡಿಸಿದ್ದ ಬೆಳ್ಳಿಯ ಮುಖವಾಡಗಳು ಹಾಗೂ ಕಾಣಿಕೆ ಡಬ್ಬಿಯಲ್ಲಿದ್ದ ನಗದು ಹಣವನ್ನು ಕಳವು ಮಾಡಿರುವ ಘಟನೆ ಬೆಳಪು ಗ್ರಾಮದಲ್ಲಿ ನಡೆದಿದೆ.
ಬೆಳಪು ಗ್ರಾಮದ ಬ್ರಹ್ಮಲಿಂಗೇಶ್ವರ ಮತ್ತು ಖಡ್ಗೇಶ್ವರಿ ದೇವಸ್ಥಾನದಲ್ಲಿ ಈ ಕಳ್ಳತನ ನಡೆದಿದೆ. ಆಗಸ್ಟ್ 24ರಂದು ಸಂಜೆ 6.30ರ ವೇಳೆಗೆ ದೇವಸ್ಥಾನದ ಬಾಗಿಲಿಗೆ ಬೀಗ ಹಾಕಿ ಭದ್ರಪಡಿಸಲಾಗಿತ್ತು. ಮರುದಿನ ಬೆಳಗ್ಗೆ 7.30ರ ಸುಮಾರಿಗೆ ದೇವಸ್ಥಾನದ ಎದುರಿನ ಬಾಗಿಲು ಅರ್ಧ ತೆರೆದಿರುವುದನ್ನು ಗಣೇಶ್ ದೇವಾಡಿಗರು ಗಮನಿಸಿ ಕಾರ್ಯದರ್ಶಿಗೆ ಮಾಹಿತಿ ನೀಡಿದರು.
ವಿಷಯ ತಿಳಿದು ದೇವಸ್ಥಾನಕ್ಕೆ ತೆರಳಿ ಪರಿಶೀಲಿಸಿದ ಅಧ್ಯಕ್ಷ ಪ್ರಕಾಶ್ ರಾವ್ ಅವರಿಗೆ, ಕಳ್ಳರು ದೇವಸ್ಥಾನದ ಬಾಗಿಲಿನ ಚಿಲಕ ಮುರಿದು ಒಳನುಗ್ಗಿರುವುದು ಕಂಡುಬಂದಿದೆ. ಬಳಿಕ ಗರ್ಭಗುಡಿಯ ಬೀಗವನ್ನೂ ಮುರಿದು, ಎರಡು ದೇವರ ಮೂರ್ತಿಗಳಿಗೆ ತೊಡಿಸಿದ್ದ ಬೆಳ್ಳಿಯ ಮುಖವಾಡಗಳನ್ನು ಕಳವು ಮಾಡಿದ್ದಾರೆ. ಅಲ್ಲದೆ, ದೇವಸ್ಥಾನದ ಪ್ರಾಂಗಣದಲ್ಲಿದ್ದ ಕಾಣಿಕೆ ಡಬ್ಬಿಯ ಬೀಗ ಮುರಿದು ಅದರಲ್ಲಿದ್ದ ನಗದು ಹಣವನ್ನೂ ಕೊಂಡೊಯ್ದಿದ್ದಾರೆ.
ಕಳುವಾದ ಬೆಳ್ಳಿಯ ಮುಖವಾಡಗಳ ಅಂದಾಜು ಮೌಲ್ಯ ಸುಮಾರು 1.30 ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ. ಕಾಣಿಕೆ ಡಬ್ಬಿಯಲ್ಲಿದ್ದ ನಗದು ಮೊತ್ತದ ನಿಖರ ಮಾಹಿತಿ ಲಭ್ಯವಾಗಿಲ್ಲ.
ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 73/2026, ಕಲಂ 305, 331 BNS ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



