Home Crime ತಡರಾತ್ರಿ ಜಿಲ್ಲಾ ಕಾರಗ್ರಹಕ್ಕೆ ದಾಳಿ : ಕೈದಿಗಳ ಬಳಿಯಿದ್ದ ಮೊಬೈಲ್‌ಗಳು ಜಪ್ತಿ…!!

ತಡರಾತ್ರಿ ಜಿಲ್ಲಾ ಕಾರಗ್ರಹಕ್ಕೆ ದಾಳಿ : ಕೈದಿಗಳ ಬಳಿಯಿದ್ದ ಮೊಬೈಲ್‌ಗಳು ಜಪ್ತಿ…!!

ಮಂಗಳೂರು: ನಗರದಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಸೋಮವಾರ ತಡರಾತ್ರಿ ದಾಳಿ ನಡೆಸಿರುವ ಪೊಲೀಸರು ನ್ಯಾಯಾಂಗ ಬಂಧನದಲ್ಲಿರುವ ಕೈದಿಗಳ ಬಳಿಯಿಂದ 10 ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಖಚಿತ ಮಾಹಿತಿಯ ಆಧಾರದಲ್ಲಿ ಪೊಲೀಸರು ಸೋಮವಾರ ತಡರಾತ್ರಿ ಜಿಲ್ಲಾ ಕಾರಾಗೃಹಕ್ಕೆ ಏಕಾಏಕಿ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂದರ್ಭ ಎ-ಬ್ಲಾಕ್ ನಲ್ಲಿದ್ದ ಕೈದಿಗಳ ಪೈಕಿ ನ್ಯಾಯಾಂಗ ಬಂಧನದಲ್ಲಿರುವ ಕೈದಿಗಳಾದ ರಿಫತ್ ಅಲಿ, ಇಬ್ರಾಹೀಂ ಖಲೀಲ್‌, ಅಶ್ಫಾಕ್ ಅಲಿಯಾಸ್ ಜುಟ್ಟು ಅಶ್ಫಾಕ್, ಅರ್ಷದ್‌, ದಾವೂದ್ ಫರ್ವೇಝ್, ನಝರತ್ ಅಲಿ, ಶಿಫಾನ್, ಅಬ್ದುಲ್ ಸಾದಿಕ್ ಮತ್ತು ಅರ್ಫಾಝ್ ಎಂಬವರು ಅಕ್ರಮವಾಗಿ 10 ಮೊಬೈಲ್ ಗಳನ್ನು ಬಚ್ಚಿಟ್ಟಕೊಂಡಿರುವುದು ಪತ್ತೆಯಾಗಿದೆ.

ಆ ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಕೈದಿಗಳ ಪೈಕಿ ರಿಫತ್ ಅಲಿ, ಇಬ್ರಾಹೀಂ ಖಲೀಲ್‌, ಅಶ್ಫಾಕ್ ಅಲಿಯಾಸ್ ಜುಟ್ಟು ಅಶ್ಫಾಕ್, ಅರ್ಷದ್ ಇತ್ತೀಚೆಗೆ ತೊಕ್ಕೊಟ್ಟು ಬಳಿ ನಡೆದ ಆರಿಫ್‌ ಕೊಲೆ ಪ್ರಕರಣದ ಆರೋಪಿಗಳಾಗಿದ್ದಾರೆ. ದಾವೂದ್ ಫರ್ವೇಝ್, ನಝರತ್ ಅಲಿ, ಶಿಫಾನ್, ಅಬ್ದುಲ್ ಸಾದಿಕ್ ಡ್ರಗ್ಸ್ ಪೆಡ್ಲರ್ ಆರೋಪಿಗಳಾಗಿದ್ದರೆ, ಅರ್ಫಾಝ್ ಕೋಕಾ ಪ್ರಕರಣದ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೈಲಿನಿಂದ ವಶಪಡಿಸಿಕೊಂಡಿರುವ ಮೊಬೈಲ್ ಫೋನ್ ಗಳ ಬಳಕೆ ಮತ್ತು ಅವುಗಳ ಪೂರೈಕೆಗೆ ಸಂಬಂಧಿಸಿ ಬರ್ಕೆ ಪೊಲೀಸ್‌ ಠಾಣೆಯಲ್ಲಿ ತನಿಖೆ ಮುಂದುವರಿದಿದೆ.

ಪ್ರಕರಣಕ್ಕೆ ಸಂಬಂಧಿಸಿದ ಇತರ ಮಾಹಿತಿಗಳನ್ನು ಸಹ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.