Home Latest ಉಡುಪಿ ಭಾರತೀಯ ಆಧ್ಯಾತ್ಮಿಕ ಪರಂಪರೆಯ ಪ್ರಮುಖ ಕೇಂದ್ರ : ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್…!!

ಉಡುಪಿ ಭಾರತೀಯ ಆಧ್ಯಾತ್ಮಿಕ ಪರಂಪರೆಯ ಪ್ರಮುಖ ಕೇಂದ್ರ : ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್…!!

ಉಡುಪಿ: ಉಡುಪಿಯ ರಾಮಕಥಾ ಸಮಿತಿ ವತಿಯಿಂದ ಆಯೋಜಿಸಿದ್ದ ಪೂಜ್ಯ ಸಂತ ಶ್ರೀ ಮುರಾರಿ ಬಾಪುಜಿ ಅವರ ‘ರಾಮಕಥಾ’ ಕಾರ್ಯಕ್ರಮದಲ್ಲಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಭಾಗವಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಪಾಲರು, ಶ್ರೀಕೃಷ್ಣನ ಮೇಲಿನ ಭಕ್ತಿಯ ನಿರಂತರ ಹರಿವು ಹರಿಯುತ್ತಿರುವ ಪವಿತ್ರ ಉಡುಪಿಯ ನೆಲದಲ್ಲಿ ಪೂಜ್ಯ ಮುರಾರಿ ಬಾಪು ಅವರಿಂದ ರಾಮಕಥೆಯನ್ನು ಆಲಿಸುವ ಅವಕಾಶ ದೊರೆತಿರುವುದು ಸಂತೋಷದ ಸಂಗತಿ ಎಂದ ಅವರು ಕಾರ್ಯಕ್ರಮ ಆಯೋಜಿಸಿದ ಶ್ರೀ ಪ್ರವೀಣ್ ಕಾಂಜಿ ತನ್ನಾ ಹಾಗೂ ಉಡುಪಿಯ ರಾಮಕಥಾ ಸಮಿತಿಗೆ ಕೃತಜ್ಞತೆ ಸಲ್ಲಿಸಿದರು.

ಪೂಜ್ಯ ಸಂತ ಶ್ರೀ ಮುರಾರಿ ಬಾಪುಜಿ ಅವರು ರಾಮಕಥೆಯ ಪ್ರಸಿದ್ಧ ನಿರೂಪಕರು, ಆಧ್ಯಾತ್ಮಿಕ ಚಿಂತಕರು ಹಾಗೂ ಪ್ರೀತಿ, ಕರುಣೆ ಮತ್ತು ಸಾಮರಸ್ಯದ ಸಂದೇಶವನ್ನು ಸಮಾಜದಲ್ಲಿ ಹರಡುತ್ತಿರುವ ಸಂತರು. ತಮ್ಮ ಸರಳ ಹಾಗೂ ಹೃದಯಸ್ಪರ್ಶಿ ನಿರೂಪಣೆಯ ಮೂಲಕ ಶ್ರೀರಾಮನ ಆದರ್ಶಗಳನ್ನು ಲಕ್ಷಾಂತರ ಜನರ ಹೃದಯಗಳಿಗೆ ತಲುಪಿಸುತ್ತಿದ್ದಾರೆ. ಅವರ ರಾಮಕಥೆಗಳು ಮಾನವೀಯತೆ, ನೈತಿಕತೆ, ಸೇವೆ ಹಾಗೂ ಜೀವನ ಮೌಲ್ಯಗಳ ಕುರಿತು ಅರಿವು ಮೂಡಿಸುತ್ತಿವೆ ಎಂದು ತಿಳಿಸಿದರು.

ಉಡುಪಿ ಭಾರತೀಯ ಆಧ್ಯಾತ್ಮಿಕ ಪರಂಪರೆಯ ಪ್ರಮುಖ ಕೇಂದ್ರವಾಗಿದ್ದು, ಸಂತ ಮಧ್ವಾಚಾರ್ಯರ ಮಹಾನ್ ಪರಂಪರೆ ಹಾಗೂ ಶ್ರೀಕೃಷ್ಣನ ಭಕ್ತಿಗೆ ಹೆಸರುವಾಸಿಯಾಗಿದೆ. ಇದೇ ಪವಿತ್ರ ನೆಲದಲ್ಲಿ ಇಂದು ಶ್ರೀರಾಮನ ಕಥೆಯ ಅಮೃತವೂ ಹರಿಯುತ್ತಿರುವುದು ಭಾರತದ ವೈವಿಧ್ಯಮಯ ಹಾಗೂ ಶ್ರೀಮಂತ ಆಧ್ಯಾತ್ಮಿಕ ಪರಂಪರೆಯ ಪ್ರತೀಕವಾಗಿದೆ” ಎಂದು ರಾಜ್ಯಪಾಲರು ಹೇಳಿದರು.

“ರಾಮಾಯಣವು ಸತ್ಯ, ಘನತೆ, ಕರ್ತವ್ಯ, ತ್ಯಾಗ, ಪ್ರೀತಿ ಮತ್ತು ಸೇವೆಯ ಶಾಶ್ವತ ಸಂದೇಶವನ್ನು ನೀಡುತ್ತದೆ. ಎಷ್ಟೇ ಕಠಿಣ ಪರಿಸ್ಥಿತಿಗಳು ಎದುರಾದರೂ ನಮ್ಮ ತತ್ವಗಳು ಮತ್ತು ಕರ್ತವ್ಯಗಳಿಂದ ವಿಮುಖರಾಗಬಾರದು ಎಂಬುದನ್ನು ಭಗವಾನ್ ಶ್ರೀರಾಮನ ಜೀವನ ನಮಗೆ ಕಲಿಸುತ್ತದೆ. ಕುಟುಂಬದಲ್ಲಿ ಮೌಲ್ಯಗಳನ್ನು, ಸಮಾಜದಲ್ಲಿ ಸಾಮರಸ್ಯವನ್ನು ಹಾಗೂ ಜೀವನದಲ್ಲಿ ಶಿಸ್ತನ್ನು ಬೆಳೆಸಲು ರಾಮಾಯಣವು ಪ್ರೇರಣೆ ನೀಡುತ್ತದೆ ಎಂದು ರಾಜ್ಯಪಾಲರು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರವೀಣ್ ಕಾಂಜಿ ತನ್ನಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.