Home Crime ಅಪ್ರಾಪ್ತ ವಯಸ್ಸಿನ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ : ಆರೋಪಿಗೆ 20 ವರ್ಷಗಳ ಕಠಿಣ ಶಿಕ್ಷೆ…!!

ಅಪ್ರಾಪ್ತ ವಯಸ್ಸಿನ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ : ಆರೋಪಿಗೆ 20 ವರ್ಷಗಳ ಕಠಿಣ ಶಿಕ್ಷೆ…!!

ಚಿಕ್ಕಮಗಳೂರು : ಅಪ್ರಾಪ್ತ ವಯಸ್ಸಿನ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 20 ವರ್ಷಗಳ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.

ಬಾಳೆಹೊನ್ನೂರು ಮಾಗುಂಡಿಯ ಎಂ.ಖಾಸಿಂ ಶಿಕ್ಷೆಗೆ ಒಳಗಾದ ಆರೋಪಿ. ಈತ ಭದ್ರಾ ಸೈಟ್ ಹೆಮ್ಮಕ್ಕಿ ಗ್ರಾಮದ ಅಂಗಡಿ ಮಳಿಗೆಯಲ್ಲಿ ಆರೇಳು ವರ್ಷಗಳಿಂದ ಗುಜರಿ ವ್ಯಾಪಾರ ಮಾಡಿಕೊಂಡಿದ್ದ. ಈತ ತನ್ನ ಅಂಗಡಿಗೆ ಸಮಯ ಕಳೆಯಲೆಂದು ಬರುತ್ತಿದ್ದ 15 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಬಾಲಕನ ತಾಯಿ ಕಳಸ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕಳಸ ವೃತ್ತ ನಿರೀಕ್ಷಕ ಪ್ರಕಾಶ್, ಪಿಎಸ್ಸೈ ಚಂದ್ರಶೇಖರ್, ಮಹಿಳಾ ಕಾನ್‌ಸ್ಟೇಬಲ್ ಮೇನಕಾ, ಸಿಬ್ಬಂದಿ ಎ.ಬಿ.ಪರಮೇಶ, ಶಿವಕುಮಾರ್ ಮತ್ತು ಗಿರೀಶ್ ಅವರನ್ನು ಒಳಗೊಂಡ ತಂಡವು ತನಿಖೆ ನಡೆಸಿ ಸಾಕ್ಷ್ಯ ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತ್ತು.

ಈ ಬಗ್ಗೆ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ರಾಘವೇಂದ್ರ ಕುಲಕರ್ಣಿ ಅವರು ಆರೋಪಿ ಎಂ.ಖಾಸಿಂ ವಿರುದ್ಧ ಆರೋಪಗಳು ಸಾಬೀತಾದ್ದರಿಂದ 20 ವರ್ಷಗಳ ಕಠಿಣ ಶಿಕ್ಷೆ, 25 ಸಾವಿರ ರೂ. ದಂಡ, ಭಾರತೀಯ ನ್ಯಾಯ ಸಂಹಿತೆ ಕಲಂ 351(2) ರಡಿಯಲ್ಲಿ 1 ವರ್ಷ ಕಠಿಣ ಶಿಕ್ಷೆ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಪೊಕ್ಸೊ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ಬಿ.ಭರತ್ ಕುಮಾರ್ ಅವರು ವಾದ ಮಂಡಿಸಿದ್ದರು.