ಉಡುಪಿ: ಅಸಹಾಯಕ ಸ್ಥಿತಿಯಲ್ಲಿದ್ದ ಅಪ್ರಾಪ್ತ ಬಾಲಕಿಯನ್ನು ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ರಕ್ಷಿಸಲಾಗಿದೆ.
ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಾರ್ಥಿಯಾಗಿ ತೆರಳಿದ್ದ, ಆದಿ ಉಡುಪಿಯ ಪ್ರೇಮ ರಾಮಚಂದ್ರ ಎನ್ನುವರಿಗೆ ಬಾಲಕಿ ಕಂಡುಬಂದಿದ್ದಾಳೆ. ಅವರು ಬಾಲಕಿಯ ಚಲನವಲನ ಕಂಡು ಸಂಶಯಗೊಂಡು ವಿಚಾರಿಸಿದಾಗ ಬಾಲಕಿ ಮನನೊಂದು ಮನೆ ಬಿಟ್ಟು ಬಂದಿರುವುದಾಗಿ ತಿಳಿದುಬಂದಿದೆ.
ತಕ್ಷಣ ಅವರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದಾರೆ. ನೆರವಿಗೆ ಬಂದ ಒಳಕಾಡು, ನಗರ ಪೋಲಿಸ್ ಠಾಣೆಗೆ ಮಾಹಿತಿ ನೀಡಿ, ಬಾಲಕಿಗೆ ದೊಡ್ಡಣಗುಡ್ಡೆಯ ಬಾಲಕಿಯರ ಬಾಲ ಮಂದಿರದಲ್ಲಿ ಪುನರ್ವಸತಿ ಕಲ್ಪಿಸಿದರು.
ಕಾರ್ಯಾಚರಣೆಗೆ ಹರೀಶ್ ಪೂಜಾರಿ ಉದ್ಯಾವರ ಸಹಕರಿಸಿದರು. ಬಾಲಕಿ ನಾಪತ್ತೆಯಾದ ಬಗ್ಗೆ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಳೇಬೀಡು ಪೋಲಿಸರು ಬಾಲಕಿ ಉಡುಪಿಯಲ್ಲಿ ಪತ್ತೆಯಾಗಿರುವ ಮಾಹಿತಿ ತಿಳಿದು ಬಾಲಕಿಯ ತಾಯಿಯೊಂದಿಗೆ ಬಂದಿದ್ದರು. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಹಳೇಬೀಡಿನ ಪೋಲಿಸರಿಗೆ ಬಾಲಕಿಯನ್ನು ಒಪ್ಪಿಸಿದರು. ಆದರೆ ತಾಯಿಯೊಂದಿಗೆ ತೆರಳಲು ಒಪ್ಪದ ಕಾರಣ ಬಾಲಕಿಗೆ ಚಿಕ್ಕಮಗಳೂರು ಬಾಲಕಿಯರ ಬಾಲ ಮಂದಿರದಲ್ಲಿ ಪುರ್ನವಸತಿ ಕಲ್ಪಿಸುವ ಪ್ರಕ್ರಿಯೆ ಮುಂದುವರೆದಿದೆ.



