ನ್ಯೂಯಾರ್ಕ್: ಭಾರತೀಯ ಮೂಲದ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ ಆರೋಪದ ಮೇಲೆ ನ್ಯೂಜೆರ್ಸಿಯಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ.
ನ್ಯೂಜೆರ್ಸಿಯ ಹಿಲ್ಸ್‌ಬರೋದ ಪ್ರಿಯತರ್ಸಿನಿ ನಟರಾಜನ್ (35) ತನ್ನ ಇಬ್ಬರು ಮಕ್ಕಳನ್ನು ಕೊಂದಿದ್ದಾರೆಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿ 13 ರಂದು ಸಂಜೆ ಸರಿಸುಮಾರು 6:45 ಕ್ಕೆ, ಮಕ್ಕಳ ತಂದೆ 911 ಕರೆ ಮಾಡಿ, ಕೊಲೆಯಾಗಿರುವ ವಿಚಾರವನ್ನು ತಿಳಿಸಿದ್ದರು.
ಹತ್ಯೆಯಾದ ಮಕ್ಕಳ ತಂದೆ ಕೆಲಸ ಮುಗಿಸಿ ಮನೆಗೆ ಹಿಂತಿರುಗಿದ್ದರು. ಈ ವೇಳೆ ಅವರ 5 ಮತ್ತು 7 ವರ್ಷ ವಯಸ್ಸಿನ ಇಬ್ಬರು ಗಂಡು ಮಕ್ಕಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡಿದ್ದಾರೆ. ತನ್ನ ಪತ್ನಿ ಮಕ್ಕಳನ್ನು ಹತ್ಯೆ ಮಾಡಿರುವುದನ್ನು ತಿಳಿದು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಬಂದ ಪೊಲೀಸರು, ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಕೊಲೆ ಆರೋಪಿಯನ್ನು ಹಿಲ್ಸ್‌ಬರೋ ಪೊಲೀಸ್ ಅಧಿಕಾರಿಗಳು ಬಂಧಿಸಿ ಸೋಮರ್‌ಸೆಟ್ ಕೌಂಟಿ ಜೈಲಿನಲ್ಲಿಟ್ಟಿದ್ದಾರೆ. ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಈಕೆಯ ಪತಿಯನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಹೆಚ್ಚಿನ ವಿಚಾರ ನಡೆಯುತ್ತಿದೆ.



