Home Art & Entertainment ಸದ್ಯ ಕನ್ನಡ ಚಿತ್ರರಂಗದಲ್ಲಿ “ಪ್ರೇಮದ ಊರಲ್ಲಿ” ಸಿನಿಮಾದ್ದೇ ಸದ್ದು…!!

ಸದ್ಯ ಕನ್ನಡ ಚಿತ್ರರಂಗದಲ್ಲಿ “ಪ್ರೇಮದ ಊರಲ್ಲಿ” ಸಿನಿಮಾದ್ದೇ ಸದ್ದು…!!

ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ‘ಪ್ರೇಮದ ಊರಲಿ’ ಸಿನಿಮಾ ಸದ್ಯ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಕೇವಲ 10 ದಿನಗಳಲ್ಲಿ ಬರೋಬ್ಬರಿ 16 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ಸಿನಿಮಾ ಗೆಲುವಿನ ಹಾದಿಯಲ್ಲಿ ಮುನ್ನುಗ್ಗುತ್ತಿದೆ.

ಸ್ಯಾಂಡಲ್ ವುಡ್ ನಲ್ಲಿ ಸದ್ಯ ‘ಪ್ರೇಮದ ಊರಲಿ’ ಸಿನಿಮಾದ್ದೇ ಕಾರುಬಾರು. ಯಾವುದೇ ದೊಡ್ಡ ಸ್ಟಾರ್ ನಟರಿಲ್ಲದೆ, ಅಬ್ಬರದ ಪ್ರಚಾರವೂ ಇಲ್ಲದೆ ಕಳೆದ ಸೆಪ್ಟೆಂಬರ್ 25 ರಂದು ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿದ್ದ ಈ ಪುಟ್ಟ ಸಿನಿಮಾ ಈಗ ಗಲ್ಲಾಪೆಟ್ಟಿಗೆಯಲ್ಲಿ ಸುನಾಮಿ ಎಬ್ಬಿಸಿದೆ.

ಸೆಪ್ಟೆಂಬರ್ 25ರಂದು ಯಾವುದೇ ಅಬ್ಬರವಿಲ್ಲದೆ ತೆರೆಕಂಡ ಚಿತ್ರಕ್ಕೆ ಆರಂಭದಲ್ಲಿ ಆತಂಕ ಎದುರಾದರೂ, ಬಾಯಿಮಾತಿನ ಪ್ರಚಾರದ ಮೂಲಕ ಪ್ರದರ್ಶನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಯಿತು.ಈ ಚಿತ್ರ ಹಳ್ಳಿಯ ಸುಂದರ ನೋಟದ ಪ್ರೇಮ ಕಥೆಯನ್ನು ಒಳಗೊಂಡಿದೆ.

ಬಿಡುಗಡೆಯಾದ ಮೊದಲ ದಿನ ಕೇವಲ 45 ಶೋಗಳನ್ನು ಹೊಂದಿದ್ದ ಈ ಚಿತ್ರ, ಸದ್ಯ ಪ್ರೇಕ್ಷಕರ ಅಭೂತಪೂರ್ವ ಬೆಂಬಲದಿಂದಾಗಿ ಕರ್ನಾಟಕದಾದ್ಯಂತ ದಿನಕ್ಕೆ 450 ಕ್ಕೂ ಹೆಚ್ಚು ಶೋಗಳನ್ನು ಕಾಣುವ ಮೂಲಕ ದಾಖಲೆ ಬರೆದಿದೆ.

ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಚಿತ್ರದ ನಿರ್ದೇಶಕ ಮನೋಜ್ ಕುಮಾರ್, ರಂಗಾಯಣ ರಘು ಸೇರಿದಂತೆ ಪ್ರಮುಖ ಕಲಾವಿದರು ‘ಪ್ರೇಮದ ಊರಲಿ’ ರೂಪುಗೊಂಡ ಹಿಂದಿನ ಕಷ್ಟ, ಭಾವನೆ ಮತ್ತು ಗೆಲುವಿನ ಕಥೆಯನ್ನು ಹಂಚಿಕೊಂಡಿದ್ದಾರೆ.

ದೊಡ್ಡ ತಾರೆಯರಿಲ್ಲದೆ, ಅಬ್ಬರದ ಪ್ರಚಾರವೂ ಇಲ್ಲದೆ ಬಿಡುಗಡೆಯಾಗುವ ಸಣ್ಣ ಕನ್ನಡ ಚಿತ್ರವೊಂದು ಸಾಮಾನ್ಯವಾಗಿ ಮೊದಲ ದಿನದ ಮಧ್ಯಾಹ್ನದ ವೇಳೆಗೆ ಸೋಲಿನ ಹಣೆಪಟ್ಟಿ ಹೊತ್ತುಕೊಳ್ಳುತ್ತದೆ. ಆದರೆ, ಮನೋಜ್ ಕುಮಾರ್ ‌ನಿರ್ದೇಶನದ ಈ ಚಿತ್ರ ಜನರ ದೈನಂದಿನ ಬದುಕಿನ ನೆಲೆಯಿಂದ ಹುಟ್ಟಿದ ಪ್ರಾಮಾಣಿಕ ಕಥೆಯೊಂದು ಈ ಎಲ್ಲ ಲೆಕ್ಕಾಚಾರವನ್ನೇ ಬದಲಿಸಿದೆ.

ನಟ ರಂಗಾಯಣ ರಘು, ನಾಯಕ ನಟ ಶ್ರೀರಾಮ್ (ಸಂತು), ರಾಮಿಕಾ ಶಿವು (ವಸಂತ) ಹಾಗೂ ತಪಸ್ವಿನಿ ಪೂಣಚ್ಚ (ರುಕ್ಮಿಣಿ), ಇಳಾ ವಿಟ್ಲ ಇವರೆಲ್ಲಾ ಈ ಚಿತ್ರದಲ್ಲಿ ನಟಿಸಿದ್ದಾರೆ.

“ಪ್ರೇಮದ ಊರಲ್ಲಿ” ಚಿತ್ರ ಇಷ್ಟು ದೊಡ್ಡಮಟ್ಟಕ್ಕೆ ಓಡ್ತದೆ ಅಂತ ನಿರೀಕ್ಷೆ ಇರಲಿಲ್ಲ. ಡೈರೆಕ್ಟರ್ ಮನೋಜ್ ಕುಮಾರ್ ಬಂದು ಕಥೆ ಹೇಳಿದಾಗ ಖುಷಿ ಆಯಿತು. ಮಾಡ್ತೀನಿ ಅಂತಲೂ ಹೇಳಿದೆ. ಆ ಪ್ರಕಾರ ಈ ಚಿತ್ರ ಮಾಡಿದ್ದೇನೆ. ಈ ಚಿತ್ರದ ನಿರ್ಮಾಪಕರು ಆರಂಭದಲ್ಲಿ ಕೊರಳಲ್ಲಿ ಬಂಗಾರದ ಚೈನ್ ಹಾಕಿಕೊಂಡೇ ಬಂದಿದ್ದರು. ಆದರೆ, ಸಿನಿಮಾ ಮುಗಿಯೋ ಹೊತ್ತಿಗೆ ಕೊರಳು ಖಾಲಿ ಆಗಿತ್ತು. ಈ ಸಿನಿಮಾದ ಮತ್ತೊಬ್ಬ ನಿರ್ಮಾಪಕರು ಬೇಕರಿಯಲ್ಲಿದ್ದರು. ಅವರು ಆ ಕೆಲಸವನ್ನ ಬಿಟ್ಟಿದ್ದಾರೆ. ಈ ರೀತಿ ತಮ್ಮ “ಪ್ರೇಮದ ಊರಲಿ” ಚಿತ್ರದ ಹಿಂದಿನ ಗೊತ್ತಿರದ ವಿಚಾರವನ್ನ ರಂಗಾಯಣ ರಘು ಹೇಳಿಕೊಂಡಿದ್ದಾರೆ.