ಬೆಂಗಳೂರು: ನಡೆದುಕೊಂಡು ಹೋಗುತ್ತಿದ್ದ ಸಾರ್ವಜನಿಕರನ್ನು ಬೈಕ್‌ನಲ್ಲಿ ಹಿಂಬಾಲಿಸಿ ಮೊಬೈಲ್ ದೋಚಿ ಪರಾರಿಯಾಗುತ್ತಿದ್ದ ನಾಲ್ವರು ಆರೋಪಿಗಳನ್ನು ಗೋವಿಂದರಾಜನಗರ ಠಾಣೆ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಜೆ.ಜೆ.ನಗರ ನಿವಾಸಿಗಳಾದ ಪರ್ವೇಜ್ ಖಾನ್(30), ಜುಬೇರ್ ಪಾಷಾ (32), ಸದ್ದಾಂ(28) ಹಾಗೂ ಅಮ್ಜದ್ ಪಾಷಾ(30) ಬಂಧಿತ ಆರೋಪಿಗಳು.
ಆರೋಪಿಗಳಿಂದ 18 ಲಕ್ಷ ರೂ. ಮೌಲ್ಯದ 120 ಮೊಬೈಲ್‌ಗಳು, 1 ಬೈಕ್, 3500 ರೂ. ನಗದು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳ ಪೈಕಿ ಪರ್ವೇಜ್ ಖಾನ್ ಮತ್ತು ಜುಬೇರ್ ಪಾಷಾ ಮೊಬೈಲ್‌ಗಳನ್ನು ಕಳವು ಮಾಡುತ್ತಿದ್ದರು. ಬಳಿಕ ಸದ್ದಾಂ ಮತ್ತು ಅಮ್ಜದ್ ಪಾಷಾ ಕಳವು ಮೊಬೈಲ್‌ಗಳನ್ನು ಸ್ವೀಕರಿಸಿ ಮರು ಮಾರಾಟ ಮಾಡುತ್ತಿದ್ದರು.
ಇತ್ತೀಚೆಗೆ ದೂರುದಾರರು ಸುಬ್ಬಣ್ಣ ಗಾರ್ಡನ್ ನಿವಾಸಿ ವಿನಾಯಕ್ ಲೇಔಟ್‌ನಲ್ಲಿರುವ ಸ್ಟಡಿ ಸೆಂಟರ್‌ನಿಂದ ರೂಮ್‌ಗೆ ಹೋಗುವಾಗ ಪಿಎಪ್ ಲೇಔಟ್‌ನ ಬಿಬಿಎಂಪಿ ಕಚೇರಿ ಬಳಿ ನಡೆದುಕೊಂಡು ಹೋಗುವಾಗ ಪರ್ವೇಜ್ ಖಾನ್, ಜುಬೇರ್‌ಪಾಷಾ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಪರ್ವೇಜ್ ಖಾನ್ ವಿರುದ್ಧ 6 , ಜುಬೇರ್‌ಪಾಷಾ ವಿರುದ್ಧ 2 ಮೊಬೈಲ್ ಕಳವು ಪ್ರಕರಣಗಳು ದಾಖಲಾಗಿವೆ. ಪಶ್ಚಿಮ ವಿಭಾಗ ಎಸ್. ಗಿರೀಶ್, ವಿಜಯನಗರ ಉಪವಿಭಾಗ ಚಂದನ್ ಕುಮಾರ್, ಠಾಣಾಧಿಕಾರಿ ಕೆ.ಸುಬ್ರಮಣಿ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ.



