ಬೈಂದೂರು: ಮನೆಯ ಹೊರಗೆ ಗಲಾಟೆ ಶಬ್ದ ಕೇಳಿ ಚರ್ಚಿಸುತ್ತಿದ್ದಾಗ ಮನೆಗೆ ಅಕ್ರಮ ಪ್ರವೇಶ ಮಾಡಿ ಮಹಿಳೆಯರಿಗೆ ನಿಂದಿಸಿ ಹಲ್ಲೆ ನಡೆಸಿ ಚಿನ್ನದ ಸರ ಅಪಹರಿಸಿದ ಘಟನೆ ನಂದನವನ ಕೆರ್ಗಾಲುವಿನಲ್ಲಿ ನಡೆದಿದೆ.
ದೂರುದಾರರು ಐಶ್ವರ್ಯ (23), ನಂದನವನ ಕೆರ್ಗಾಲು. ಅ.25 ರಂದು ರಾತ್ರಿ 9:15ಕ್ಕೆ ಮನೆಯಲ್ಲಿದ್ದಾಗ ಹೊರಗಡೆ ಗಲಾಟೆ ಶಬ್ದ ಕೇಳಿ ದೂರುದಾರರು ಮತ್ತು ತಾಯಿ ಸಾವಿತ್ರಿ ಆರ್ ಚರ್ಚಿಸುತ್ತಿದ್ದರು. ಆಗ ಆರೋಪಿಗಳಾದ ಸಂಜಯ್ ದೇವಾಡಿಗ, ಶ್ರೀಕರ್ ಶೆಟ್ಟಿ ನಾಡಾ, ಸಂತೋಷ, ಪ್ರಮೋದ ಹಾಗೂ ಇತರರು ಮನೆಗೆ ಅಕ್ರಮ ಪ್ರವೇಶ ಮಾಡಿ ದೂರುದಾರರು ಮತ್ತು ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಯಿಂದ ದೂಡಿದ್ದಾರೆ. ರಕ್ಷಣೆಗೆ ಬಂದ ಚಿಕ್ಕಪ್ಪ ರಾಜಗೋಪಾಲ ಅವರನ್ನು ಕೈಯಿಂದ ತಳ್ಳಿ, ಕಾಲಿನಿಂದ ತುಳಿದು ಕೆಳಗೆ ಬೀಳಿಸಿ, ಅವರ ಕುತ್ತಿಗೆಯಲ್ಲಿದ್ದ 1.5 ಪವನ್ ಚಿನ್ನದ ಸರವನ್ನು ಅಪಹರಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



