ಇದೇ ಬೈಂದೂರಿನಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ಬಸ್ ಸಮಯಕ್ಕೆ ಬಾರದ ವಿಚಾರದಲ್ಲಿ ಮಾತನಾಡುತ್ತಿದ್ದಾಗ ಹಲ್ಲೆ ನಡೆದಿದೆ.
ದೂರುದಾರರು ಶ್ರೀಕರ ಶೆಟ್ಟಿ (32), ನಾಡಾ ಗುಡ್ಡೆಯಂಗಡಿ. ಅ.25 ರಂದು ರಾತ್ರಿ 9:45ಕ್ಕೆ ಸ್ನೇಹಿತರೊಂದಿಗೆ ತ್ರಾಸಿ ಬಸ್ ಸ್ಟ್ಯಾಂಡ್ನಲ್ಲಿ ಬಸ್ಸಿಗಾಗಿ ಕಾಯುತ್ತಿದ್ದರು. ಬಸ್ ಸ್ನೇಹಿತನನ್ನು ಬಿಟ್ಟು ಮುಂದೆ ಹೋಗಿದ್ದರಿಂದ ದೂರುದಾರರು ತಮ್ಮ ಬೊಲೆರೊ ಕಾರು KA-20-MH-2632ರಲ್ಲಿ ಉಪ್ಪುಂದ ಹತ್ತಿರ ಬಂದು ಬಸ್ ಹತ್ತಿಸಲು ಹೋದಾಗ ಬಸ್ ನಿಲ್ಲಿಸಿದೆ. ಬಸ್ ಸಮಯಕ್ಕೆ ಸರಿಯಾಗಿ ಬಾರದಿರುವ ಬಗ್ಗೆ ಮಾತನಾಡುತ್ತಿದ್ದಾಗ ರಾತ್ರಿ 10 ಗಂಟೆಗೆ ಅಲ್ಲೇ ರಸ್ತೆ ಪಕ್ಕದ ಮನೆಯಿಂದ ಆರೋಪಿಗಳಾದ ರವಿಚಂದ್ರ ಮತ್ತು ರಾಜಗೋಪಾಲ ಮದ್ಯಪಾನ ಮಾಡಿಕೊಂಡು ಬಂದು ಅಸಭ್ಯವಾಗಿ ಮಾತನಾಡಿ, ಅವಾಚ್ಯ ಶಬ್ದಗಳಿಂದ ಬೈದು, ಕೆಳಗಿದ್ದ ಕಲ್ಲನ್ನು ದೂರುದಾರರ ತಲೆಗೆ ಎಸೆದಿದ್ದಾರೆ. ದೂರುದಾರರು ತಪ್ಪಿಸಿಕೊಂಡಾಗ ಕಲ್ಲು ಕಾರಿನ ಹಿಂದಿನ ಗಾಜಿಗೆ ಬಿದ್ದು ಗಾಜು ಸಂಪೂರ್ಣ ನಜ್ಜುಗುಜ್ಜಾಗಿದೆ.
ಇದರಿಂದ ಕೋಪಗೊಂಡ ಗೆಳೆಯ ಪ್ರಸನ್ನ ಪೂಜಾರಿ ಪ್ರಶ್ನಿಸಲು ಹೋದಾಗ ಆರೋಪಿಗಳಿಬ್ಬರೂ ಮನೆಯೊಳಗಿದ್ದ ಗಟ್ಟಿ ಪಾತ್ರೆ ತೆಗೆದು ಆತನ ತಲೆಗೆ ಹೊಡೆದು, ಅಂಗಿಯ ಕಾಲರ್ ಹಿಡಿದು ಎಳೆದಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ


