ಬೈಂದೂರು: ಹೇರಂಜಾಲು ಗ್ರಾಮದ ಶಿವಾನಂದ ದೇವಾಡಿಗ (49) ಅವರು ಕೆಲಸದ ವೇಳೆ ಕುಸಿದು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದ್ದು, ಪತ್ನಿ ನೀಡಿದ ದೂರಿನ ಮೇರೆಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಸಂಶಯಾಸ್ಪದ ಸಾವಿನ ಪ್ರಕರಣ ದಾಖಲಾಗಿದೆ.
ಮೃತ ಶಿವಾನಂದ ದೇವಾಡಿಗ ಅವರು ಕೆಂಪು ಕಲ್ಲಿನ ಕ್ವಾರೆಯಲ್ಲಿ ಕೆಲಸ ಮಾಡುತ್ತಿದ್ದರು. ಜುಲೈ 26, 2026ರಂದು ಬೆಳಿಗ್ಗೆ 5:45ಕ್ಕೆ ಎಂದಿನಂತೆ ಕಾಲ್ತೋಡು ಬೊಳ್ಳಂಬಳ್ಳಿಯಲ್ಲಿರುವ ಕ್ವಾರೆ ಕೆಲಸಕ್ಕೆ ತೆರಳಿದ್ದರು. ಕೆಲಸ ಮಾಡುವ ವೇಳೆ ತಲೆ ತಿರುಗಿ ಬಿದ್ದು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಬಳಿಕ ಅವರನ್ನು ತಕ್ಷಣ ಕುಂದಾಪುರ ಆದರ್ಶ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಆಸ್ಪತ್ರೆಗೆ ತೆರಳಿದ ಪತ್ನಿ ಪದ್ಮಾವತಿ ಅವರು ಮೃತದೇಹವನ್ನು ಪರಿಶೀಲಿಸಿದ ವೇಳೆ ತಲೆಯ ಮೇಲ್ಭಾಗದಲ್ಲಿ ಗಾಯ ಕಂಡುಬಂದಿದ್ದು, ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಸಾವಿನ ನಿಖರ ಕಾರಣದ ಬಗ್ಗೆ ತನಿಖೆ ಮುಂದುವರಿಸಲಾಗಿದೆ.




