ಉಡುಪಿ: ಕಾಂಗ್ರೆಸ್ ಮುಖಂಡ, ಉದ್ಯಮಿ ಡೇವಿಡ್ ಡಿ’ಸೋಜಾ ಶೂಟೌಟ್ ಪ್ರಕರಣದಲ್ಲಿ ಮತ್ತೆರಡು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಎರ್ಮಾಳ್ ಕಿಶೋರ್ ಪೂಜಾರಿ (47) ಹಾಗೂ ಕುತ್ಯಾರ್ ನಿವಾಸಿ ಸದಾನಂದ ದೇವಾಡಿಗ (45) ಬಂಧಿತರು. ಆರೋಪಿ ಕಿಶೋರ್ ಹಣವನ್ನು ಆರೋಪಿ ಸದಾನಂದನಿಗೆ ವರ್ಗಾವಣೆ ಮಾಡಿದ್ದು, ಸದಾನಂದ ಅದನ್ನು ಮೂವರು ಸುಪಾರಿ ಕೊಲೆಗಾರರಿಗೆ ವರ್ಗಾಯಿಸಿದ್ದಾನೆ ಎನ್ನಲಾಗಿದೆ.
ಬಂಧಿತ ಕಿಶೋರ್ ಪೂಜಾರಿ ಭೂಗತ ಪಾತಕಿ ಹೇಮಂತ್ ಪೂಜಾರಿ ಸಹೋದರ ಎಂದು ತಿಳಿದು ಬಂದಿದೆ. ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈವರೆಗೆ ಒಟ್ಟು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣದ ವಿವರ: ಸದ್ರಿ ಪ್ರಕರಣದಲ್ಲಿ ಈಗಾಗಲೇ ನೇರವಾಗಿ ಬಾಗಿಯಾದ ಆರೋಪಿತರಾದ ಅನ್ಮೋಲ್ ರಸ್ತೋಗಿ ಮತ್ತು ಜಿಯಾಹುಲ್ ವಾಜುಲ್ ಶೇಖ್ @ ದೀಪಕ್ ರವರನ್ನು ದಸ್ತಗಿರಿ ಮಾಡಲಾಗಿ ಸದ್ರಿ ಆರೋಪಿತರನ್ನು ಪೊಲೀಸ್ ಕಸ್ಟಡಿಗೆ ಪಡೆದು ಸುಧೀರ್ಘ ವಿಚಾರಣೆಗೊಳಪಡಿಸಿ, ಆರೋಪಿತರ ಬ್ಯಾಂಕ್ ಖಾತೆ ವಿವರ ಪಡೆದು ಪರಿಶೀಲಿಸಿದ ನಂತರ ಸದರಿ ಪ್ರಕರಣದಲ್ಲಿ ಆರೋಪಿತರಿಗೆ ಮೊಹಮ್ಮದ್ ಇರ್ಷಾದ್ ಹಾಗೂ ಚಿರಾಗ್ ಪೂಜಾರಿ ಎಂಬ ಆರೋಪಿತರು ಹಣ ಜಮಾ ಮಾಡಿ ಆರೋಪಿಗಳು ಕೃತ್ಯಕ್ಕೆ ಸಹಕರಿಸಿರುವುದು ತಿಳಿದುಬಂದಿದ್ದು ಸದ್ರಿ ಆರೋಪಿತರನ್ನು ದಸ್ತಗಿರಿ ಮಾಡಿರುವುದಾಗಿದೆ.
ನಂತರ ಎಲ್ಲಾ ಆರೋಪಿತರ ಬ್ಯಾಂಕ್ ಖಾತೆ ವಿವರ ಪಡೆದು ಪರಿಶೀಲಿಸಿ, ಮೊಬೈಲ್ ಹಾಗೂ ಕರೆ ವಿವರಗಳನ್ನು ವಿಶ್ಲೇಷಣೆಗೊಳಪಡಿಸಿ ಹಾಗೂ ಆರೋಪಿತರ ಚಲನ ವಲನಗಳ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದ ನಂತರ ಸದ್ರಿ ಪ್ರಕರಣದಲ್ಲಿ ಕೊಲೆಗೆ ಅಪರಾಧಿಕ ಒಳಸಂಚು ಮಾಡಿ ಈ ಕೃತ್ಯ ಮಾಡಲು ಹಣಕಾಸು ಪೂರೈಕೆ ಮಾಡಿದ ಪ್ರಮುಖ ಈ ಕೆಳಕಂಡ ಆರೋಪಿತರಾದ:
ಸದಾನಂದ ದೇವಾಡಿಗ @ ಸದಾನಂದ ಎ ಪ್ರಾಯ 41 ವರ್ಷ, ತಂದೆ ∶ ದಿವಂಗತ ಹೊನ್ನಯ್ಯ ದೇವಾಡಿಗ, ವಾಸ∶ ಅದಮಾರು ಮಠದ ಬಳಿ, ಅದಮಾರು ಅಂಚೆ, ಬಡಾ ಎರ್ಮಾಳ್ ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಮತ್ತು ಕಿಶೋರ್ ರಾಮ ಪೂಜಾರಿ ಪ್ರಾಯ 47 ವರ್ಷ, ತಂದೆ∶ದಿವಂಗತ ರಾಮಣ್ಣ ಪೂಜಾರಿ, ವಾಸ∶ ಮಹಾಲಕ್ಷ್ಮಿ ದೇವಸ್ಥಾನದ ಬಳಿ ಉಚ್ಚಿಲ ಬಡಾ ಗ್ರಾಮ ಕಾಪು ತಾಲೂಕು ಇವರಲ್ಲಿ ಆರೋಪಿ ಸದಾನಂದ ದೇವಾಡಿಗ ಈತನನ್ನು ದಸ್ತಗಿರಿ ಮಾಡಿ ಈತನಿಂದ ಕೃತ್ಯಕ್ಕೆ ಬಳಸಿದ ಎರಡು ಮೊಬೈಲ್ ಫೋನ್, ಒಂದು ಮೋಟಾರ್ ಸೈಕಲ್ ಹಾಗೂ ನಗದು ವಶಕ್ಕೆ ಪಡೆದುಕೊಂಡಿದ್ದು, ಆರೋಪಿ ಕಿಶೋರ್ ರಾಮ ಪೂಜಾರಿ ಈತನನ್ನು ದಸ್ತಗಿರಿ ಮಾಡಿ ಈತನಿಂದ ಕೃತ್ಯಕ್ಕೆ ಬಳಸಿದ ಮೂರು ಮೊಬೈಲ್ ಫೋನ್, ಒಂದು ಕ್ರೇಟಾ ಕಾರು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿತರನ್ನು ಮಾನ್ಯ ನ್ಯಾಯಲಯಕ್ಕೆ ಹಾಜರುಪಡಿಸಲಾಗುವುದು.
ಸದರಿ ಪ್ರಕರಣದಲ್ಲಿನ ನೇರವಾಗಿ ಭಾಗಿಯಾದ ಆರೋಪಿ ರಾಜು ಈತನ ಮೇಲೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಸರ್ಕಾರಿ ನೌಕರರ ಮೇಲೆ ಕೊಲೆ ಯತ್ನ ಪ್ರಕರಣದಲ್ಲಿ ಗಾಯಗೊಂಡಿದ್ದು ಜಿಲ್ಲಾ ಸರ್ಕಾರಿ ಆಸ್ಪತ್ರೆ ಅಜ್ಜರಕಾಡು ಇಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು ಸದ್ರಿ ಆರೋಪಿಯು ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೊಳಿಸಲಾಗುವುದು.







