Home Latest ತೆಲಂಗಾಣ: ಇಷ್ಟದ ಕೆಲಸಕ್ಕಾಗಿ ಪಟ್ಟು ಹಿಡಿದ ಶಿರಿಷಾ ಸಾಧನೆ : ಈಕೆ ಈಗ ಲೈನ್ ಮ್ಯಾನ್...

ತೆಲಂಗಾಣ: ಇಷ್ಟದ ಕೆಲಸಕ್ಕಾಗಿ ಪಟ್ಟು ಹಿಡಿದ ಶಿರಿಷಾ ಸಾಧನೆ : ಈಕೆ ಈಗ ಲೈನ್ ಮ್ಯಾನ್ ಅಲ್ಲ ಲೈನ್ ವುಮೆನ್…!!

ತೆಲಂಗಾಣ: ಟೂಲ್‌ಗಳನ್ನು ಜೇಬಿಗೆ ಸಿಕ್ಕಿಸಿಕೊಂಡು ವಿದ್ಯುತ್ ಕಂಬಕ್ಕೆ ಸರಸರನೆ‌ ಏರಿ, ತಂತಿ ಸರಿಪಡಿಸಿ‌, ಅದೇ ವೇಗದಲ್ಲಿ ಕೆಳಗಿಳಿಯುವ ಲೈನ್‌ಮನ್‌ಗಳನ್ನು ನೋಡಿರುತ್ತೀರಿ. ಇದೇ ಕೆಲಸವನ್ನು ಹೆಣ್ಣೊಬ್ಬಳು ಮಾಡಲು ಸಾಧ್ಯವೇ.?

ಊಹೆಯೂ ಮಾಡಿರದ, ಜನ ಅದರ ಗೋಜಿಗೇ ಹೋಗಿರದ ವಿಷಯವಿದು. ಆದರೆ, ಪ್ರತಿ ಕ್ಷೇತ್ರದಲ್ಲಿಯೂ ಉದ್ಯೋಗದಲ್ಲಿ ಸಮಾನತೆ ಬೇಕೆಂಬ ಹಠ, ಸಾಧಿಸಲೇಬೇಕೆಂಬ ಛಲ, ತೆಲಂಗಾಣದ ಯುವತಿಯೊಬ್ಬಳನ್ನು ಏರಿಸಿದ್ದು ವಿದ್ಯುತ್ ಕಂಬಕ್ಕಷ್ಟೇ ಅಲ್ಲ,‌ ಕೀರ್ತಿಯ ಉತ್ತುಂಗಕ್ಕೂ ಏರಿಸಿದೆ.

ಹೌದು, ತೆಲಂಗಾಣದ ಸಿದ್ದೀಪೇಟೆ ಜಿಲ್ಲೆಯ ಕುಗ್ರಾಮದ ಶಿರೀಷಾ ಎಂಬ ಯುವತಿಯ ಯಶೋಗಾಥೆ, ಬೆರಗು ಮೂಡಿಸುವಂತಿದೆ. ಬಡ ಕೂಲಿ ಕಾರ್ಮಿಕ‌ ಕುಟುಂಬದಲ್ಲಿ ಜನಿಸಿದ ಶಿರೀಷಾ ಸಾಧನೆ ಎಲ್ಲಾ ಮಹಿಳೆಯರಿಗೂ ಸ್ಪೂರ್ತಿ.

ಬಾಲ್ಯದಿಂದಲೇ ಸರ್ಕಾರಿ ಕೆಲಸಕ್ಕೆ ‌ಸೇರಬೇಕೆಂಬ ಬಯಕೆ ಶಿರೀಷಾಳದ್ದು. ಸಹೋದರ ಮಾವ ಬಿ.ಶೇಖರ್, ತೆಲಂಗಾಣ ದಕ್ಷಿಣ ವಿದ್ಯುತ್ ವಿತರಣಾ ನಿಗಮದಲ್ಲಿ(ಟಿಎಸ್‌ಎಸ್‌ಪಿಡಿಸಿಎಲ್) ಉಪ ಎಂಜಿನಿಯರ್ ಆಗಿದ್ದರು. ಶಿರೀಷಾಗೂ ಈ ಕ್ಷೇತ್ರದಲ್ಲಿ ಆಸಕ್ತಿ ಮೂಡಿದ್ದು, ತಮ್ಮ ಕನಸನ್ನು ಮಾವನ ಬಳಿ ಹೇಳಿಕೊಂಡರು. ಮಾವನ ಮಾರ್ಗದರ್ಶನದಂತೆ ಐಟಿಐಯಲ್ಲಿ ಎಲೆಕ್ಟ್ರಿಶಿಯನ್ ತರಬೇತಿ ಪಡೆದರು.

2019ರಲ್ಲಿ ಟಿಎಸ್‌ಎಸ್‌ಪಿಡಿಸಿಎಲ್ ಜ್ಯೂನಿಯರ್ ಲೈನ್‌ಮನ್‌ ಹುದ್ದೆಗೆ ನೇಮಕಾತಿ ಪ್ರಕಟಿಸಿತು. ಆದರೆ ಆ ಹುದ್ದೆಗೆ ಅರ್ಜಿ ಸಲ್ಲಿಸಲು ಮಹಿಳೆಯರಿಗೆ ಅವಕಾಶ ಇರಲಿಲ್ಲ. ಪ್ರಶ್ನಿಸಿದಾಗ, ‘ಮಹಿಳೆಯರಿಗೆ 18 ಅಡಿ ಕಂಬ ಏರಲು ಸಾಧ್ಯವಿಲ್ಲ’ ಎಂಬ ಉತ್ತರ ಸಂಸ್ಥೆಯಿಂದ ಬಂತು

ಇಲ್ಲೇ ಶಿರೀಷಾಳ ಛಲ ಇಮ್ಮಡಿಯಾಗಿದ್ದು. ‘ಮಹಿಳೆಯರಿಗೆ ಸಾಧ್ಯವಿಲ್ಲ’ ಎಂಬ ಮಾತನ್ನು ಅವಮಾನ ಎಂದೇ ಪರಿಗಣಿಸಿದ ಶಿರೀಷಾ, ಮತ್ತೊಬ್ಬ ಅಭ್ಯರ್ಥಿ ವಿ.ಭಾರತಿ ಎಂಬುವವರೊಂದಿಗೆ ಸೇರಿ ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಅರ್ಜಿ ಅಲ್ಲಿಸುವ ಹಂತದಲ್ಲೇ ‘ನಿಮಗಿದು ಸಾಧ್ಯವಿಲ್ಲ’ ಎಂಬ ಕಾರಣ ನೀಡಿ ಮಹಿಳೆಯರನ್ನು ತಡೆಯುವುದು ಲಿಂಗಭೇದ ಎಂದು ವಾದಿಸುತ್ತಾರೆ.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಮಹಿಳೆಯರಿಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಸೂಚಿಸಿತು. ಆದರೆ ಸಮಸ್ಯೆ ಅಲ್ಲಿಗೆ ಮುಗಿಯಲಿಲ್ಲ.

ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಅವರ ಫಲಿತಾಂಶವನ್ನು ತಡೆಹಿಡಿಯಲಾಯಿತು. ಇದರಿಂದ ಮತ್ತೆ ನ್ಯಾಯಾಲಯದ ಮೊರೆ ಹೋಗಬೇಕಾಯಿತು. ಕೊನೆಗೆ ಹೈಕೋರ್ಟ್ ಆದೇಶದಂತೆ ಶಿರೀಷಾ ಮತ್ತು ಭಾರತಿ ಅವರಿಗೆ ಪೋಲ್ ಕ್ಲೈಂಬಿಂಗ್ ಟೆಸ್ಟ್‌ಗೆ (ವಿದ್ಯುತ್ ಕಂಬ ಏರುವ ಪರೀಕ್ಷೆ) ಅವಕಾಶ ದೊರಕಿತು.

ಜೂನಿಯರ್ ಲೈನ್‌ಮನ್‌ ಹುದ್ದೆಗೆ ಆಯ್ಕೆಯಾಗಬೇಕಾದರೆ ಅಭ್ಯರ್ಥಿಗಳು ವಿದ್ಯುತ್ ಕಂಬವನ್ನು ನಿರ್ದಿಷ್ಟ ಸಮಯದಲ್ಲಿ ಏರಿ ಇಳಿಯಬೇಕು. ಈ ಪರೀಕ್ಷೆಯನ್ನೇ ಮಹಿಳೆಯರು ಪಾಸಾಗಲಾರರು ಎಂದು ಹಲವರು ಭಾವಿಸಿದ್ದರು.

ಆದರೆ, ಹಠವಾದಿ ಶಿರೀಷಾ ‌ಈ ಪರೀಕ್ಷೆಯಲ್ಲೂ ಪಾಸಾಗಬೇಕು ಎಂದು ಪಣತೊಟ್ಟಿದ್ದರು. ಈಗ, ಉದ್ಯೋಗ ಪಡೆಯುವುದೊಂದೇ ಆಗಿರಲಿಲ್ಲ ಆಕೆಯ ಗುರಿ. ಈ ಕೆಲಸಕ್ಕೆ ಮಹಿಳೆಯರೂ ಅರ್ಹರು ಎಂಬುದನ್ನು ಪುರುಷ ಪ್ರಧಾನ ಸಮಾಜದ ಮುಂದೆ ಸಾಬೀತುಪಡಿಸಬೇಕಿತ್ತು.

ಅದರಂತೆ ತಮ್ಮ ಮಾವನ ಮಾರ್ಗದರ್ಶನದಲ್ಲಿ‌ ಪ್ರತಿ ದಿನ ಕಂಬ ಏರುವುದನ್ನು ಅಭ್ಯಾಸ ಮಾಡುತ್ತಾರೆ. ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಸಲೀಸಾಗಿ ಕಂಬ ಏರುವುದನ್ನು ಶಿರೀಷಾ ಕಲಿಯುತ್ತಾರೆ. ಪರೀಕ್ಷೆ ದಿನ ಅವರು ಒಂದು ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ ಕಂಬ ಏರಿ ಇಳಿದು ಪರೀಕ್ಷೆಯಲ್ಲಿ ಪಾಸಾಗುತ್ತಾರೆ.

2022ರಲ್ಲಿ ಜೂನಿಯರ್ ಲೈನ್‌ಮನ್‌ ಆಗಿ ನೇಮಕಗೊಂಡ ಶಿರೀಷಾ, ತೆಲಂಗಾಣ ವಿದ್ಯುತ್ ವಿತರಣಾ ಸಂಸ್ಥೆಯ ಮೊದಲ ಮಹಿಳಾ ಲೈನ್‌ಮನ್‌ ಆಗಿ ಇತಿಹಾಸ ನಿರ್ಮಿಸುತ್ತಾರೆ.

ಈ ಘಟನೆಯ ಬಳಿಕ ತೆಲಂಗಾಣದಲ್ಲಿ ಮಹಿಳೆಯರಿಗೆ ಲೈನ್‌ಮನ್‌ ಹುದ್ದೆಗಳ ಬಾಗಿಲು ತೆರೆಯಿತು. ಹಿಂದೆ ಪುರುಷರಿಗೆ ಮೀಸಲಾಗಿದ್ದ ಉದ್ಯೋಗದಲ್ಲಿ ಮಹಿಳೆಯರೂ ಅವಕಾಶ ಪಡೆಯಲು ದಾರಿ ನಿರ್ಮಾಣವಾಯಿತು.

ಶಿರೀಷಾರ ಸಾಧನೆ, ಆಕೆಗೆ ಉದ್ಯೋಗ ನೀಡಿತು. ಸಮಾಜಕ್ಕೆ, ‘ಉದ್ಯೋಗದ ಅರ್ಹತೆಯನ್ನು ಲಿಂಗದ ಆಧಾರದ ಮೇಲೆ ನಿರ್ಧರಿಸಬಾರದು, ಕಾನೂನು ಹೋರಾಟದ ಮೂಲಕ ವ್ಯವಸ್ಥೆಯಲ್ಲಿರುವ ಅನ್ಯಾಯವನ್ನು ಬದಲಾಯಿಸಬಹುದು, ಗ್ರಾಮೀಣ ಹಿನ್ನೆಲೆಯ ಸಾಮಾನ್ಯ ಯುವತಿಯರೂ ದೇಶದ ಸಾಮಾಜಿಕ ಇತಿಹಾಸವನ್ನು ಬದಲಾಯಿಸಬಹುದು’ ಎಂಬ ಮೂರು ಸಂದೇಶಗಳನ್ನು ನೀಡಿದೆ.