Home Crime ರಸ್ತೆ ಬದಿ ನಿಂತಿದ್ದ ಸಿಲಿಂಡರ್ ತುಂಬಿದ ಲಾರಿಗೆ ಕಾರು ಢಿಕ್ಕಿ : ಮೂವರು ಸಾವು…!!

ರಸ್ತೆ ಬದಿ ನಿಂತಿದ್ದ ಸಿಲಿಂಡರ್ ತುಂಬಿದ ಲಾರಿಗೆ ಕಾರು ಢಿಕ್ಕಿ : ಮೂವರು ಸಾವು…!!

ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ಸಿಲಿಂಡರ್ ತುಂಬಿದ ಲಾರಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರಗೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪ ಸಂಭವಿಸಿದೆ.

ಮೃತರನ್ನ ಗುರುಕಿರಣ್ (28), ಮೋಹನ್ (30), ಜ್ಞಾನೇಶ್ (28) ಹಾಗೂ ಗಂಭೀರ ಗಾಯಗೊಂಡಿರುವ ಪ್ರೇಮ್ ಕುಮಾರ್ ಹಾಗೂ ಹೃತಿಕ್ ಎಂದು ತಿಳಿದು ಬಂದಿದೆ. ಇವರು ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಹಳಿಲ್ ಗದ್ದೆ ಗ್ರಾಮದ ನಿವಾಸಿಗಳಾಗಿದ್ದು, ಐವರು ಒಂದೇ ಗ್ರಾಮದ ಸ್ನೇಹಿತರು ಎಂದು ತಿಳಿದು ಬಂದಿದೆ.

ಮೃತರು ಮತ್ತು ಗಾಯಾಳುಗಳು ತುಮಕೂರಿನಿಂದ ಧರ್ಮಸ್ಥಳಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಕೊಟ್ಟಿಗೆಹಾರದ ಪೆಟ್ರೋಲ್ ಬಂಕ್ ಬಳಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಲಾರಿಗೆ ಹಿಂಬದಿಯಿಂದ ಕಾರು ವೇಗವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಮೂವರು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪಿದ್ದಾರೆ.

ಅಪಘಾತದ ಶಬ್ದ ಕೇಳಿ ಸ್ಥಳೀಯರು ಕೂಡಲೇ ಕಾರಿನಲ್ಲಿ ಸಿಲುಕಿದ್ದ ಗಾಯಾಳುಗಳನ್ನು ಹೊರತೆಗೆದು ಆಸ್ಪತ್ರೆಗೆ ರವಾನಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.