ಉಡುಪಿ : ಮುರಲಿ ಕಡೆಕಾರ್ ಅವರಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ‘ಗೌರವ ಪ್ರಶಸ್ತಿ’ ಬಂದಿದೆ. ಇದು ಯಾವಾಗಲೋ ಬರಬೇಕಿತ್ತು ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಮುರಲಿಯವರು ಮಾತ್ರ ಪ್ರಶಸ್ತಿ-ಸಂಮಾನಗಳ ಬಗ್ಗೆ ಯಾವತ್ತೂ ತಲೆಕೆಡಿಸಿಕೊಳ್ಳದೆ ಕಾಯಕ ತಪಸ್ಸನ್ನು ಮುಂದುವರಿಸುತ್ತ ಬಂದವರು. ಯಕ್ಷಗಾನ ಕಲಾರಂಗದಲ್ಲಿ ಅವರ ಕಾರ್ಯವೈಶಾಲ್ಯವನ್ನು ಗಮನಿಸಿದರೆ ಇದು ಒಬ್ಬ ಮನುಷ್ಯನಿಗೆ ಸಾಧ್ಯವೆ ಎಂದು ಅಚ್ಚರಿಪಡುವಂತಿದೆ. ಕೆಲವರು ಮುರಲಿಯವರೊಳಗೆ ಮೂವರು ಮನುಷ್ಯರಿರಬೇಕು ಎಂದು ಅಭಿಮಾನದಿಂದಲೇ ಹೇಳುವುದಿದೆ.
ಈ ಸಲದ ಯಕ್ಷಗಾನ ಅಕಾಡೆಮಿಯ ಪ್ರಶಸ್ತಿ ಅರ್ಹವಾಗಿಯೇ ಮುರಲಿಯವರಿಗೆ ಸಂದಿದೆ ಎಂದು ಹೇಳುವುದಕ್ಕೆ ಪ್ರಮುಖವಾದ ಕಾರಣವಿದೆ. ಮುರಲಿ ಕಡೆಕಾರ್ ಸ್ವತಃ ಯಕ್ಷಗಾನ ಕಲಾವಿದರೂ ಹೌದು, ಯಕ್ಷಗಾನ ಸಂಘಟಕರೂ ಹೌದು. ಅವರ ಯಕ್ಷಗಾನ ಆಸಕ್ತಿಯೇ ಅವರು ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಲು ಕಾರಣವಿರಬೇಕು. ಶಾಲಾಕಾಲೇಜು ಕಲಿಕೆಯ ಸಂದರ್ಭದಲ್ಲಿ ಅವರು ಬಡಗು ಮತ್ತು ತೆಂಕು ಎರಡೂ ತಿಟ್ಟುಗಳಲ್ಲಿ ಪಾತ್ರ ಮಾಡಿದ್ದರು. ಮುಂದೆ, ಅಂಬಲಪಾಡಿ ಲಕ್ಷ್ಮೀಜನಾರ್ದನ ಯಕ್ಷಗಾನ ಮಂಡಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಮೇಲೆ ಯಕ್ಷಗಾನ ನಾಟ್ಯವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಿದರು. ಬನ್ನಂಜೆ ಸಂಜೀವ ಸುವರ್ಣರ ತರಗತಿಗಳಲ್ಲಿ ಹೆಜ್ಜೆ ಹಾಕಿದರು. ಹಿರಿಯಡಕ ಗೋಪಾಲರಾಯರಲ್ಲಿ ಕೇಳಿ ತಿಳಿದುಕೊಂಡರು. ಮಣಿಪಾಲ ವಿಜಯನಾಥ ಶೆಣೈಯವರ ‘ಯಕ್ಷಮಂಡಲ’ ತಂಡದ ಖಾಯಂ ಕಲಾವಿದರಾಗಿದ್ದರು. ವಿಜಯನಾಥ ಶೆಣೈಯವರು, ಶೇಣಿ, ಚಿಟ್ಟಾಣಿ, ಅಳಿಕೆ, ನಾವಡ, ಕುಂಬ್ಳೆ, ಶಿರಿಯಾರ, ಐರೋಡಿ ಯವರಂಥ ಕಲಾವಿದರನ್ನು ಆಹ್ವಾನಿಸಿ ಯಕ್ಷಗಾನ ಕಾರ್ಯಕ್ರಮಗಳನ್ನು ಸಂಘಟಿಸುವಾಗ ಯಾರಾದರೂ ಅನುಪಸ್ಥಿತರಿದ್ದರೆ ಅವರ ಪಾತ್ರವನ್ನು ನಿರ್ವಹಿಸುವಂತೆ ಮುರಲಿಯವರಿಗೆ ಸೂಜಿಸುತ್ತಿದ್ದರು. ಹೊಸ್ತೋಟ ಮಂಜುನಾಥ ಭಾಗವತರ ಯಕ್ಷಗಾನ ಶಿಬಿರದಲ್ಲಿ ಭಾಗವಹಿಸಿ ಅಲ್ಲಿಂದ ಕೊಲ್ಕತಾಕ್ಕೆ ತೆರಳಿದ ಯಕ್ಷಗಾನ ತಂಡದ ಸದಸ್ಯರಾಗಿದ್ದರು. ಉದ್ಯಾವರ ಮಾಧವ ಆಚಾರ್ಯರ ಯಕ್ಷಗಾನ ಪ್ರಯೋಗ ತಂಡದಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಅಮೆರಿಕದ ಅಕ್ಕ ಸಮ್ಮೇಳನಕ್ಕೆ ತೆರಳಿದ ಯಕ್ಷಗಾನ ತಂಡದಲ್ಲಿ ಮುರಲಿಯವರೂ ಇದ್ದರು. ಟಿ. ಶ್ಯಾಮ ಭಟ್ಟರ ನೇತೃತ್ವದ ಕೀಲಾರು ಯಕ್ಷಗಾನ ಉತ್ಸವದಲ್ಲಿಯೂ ಪ್ರಸಿದ್ಧ ಕಲಾವಿದರೊಂದಿಗೆ ಅವರು ವೇಷ ಮಾಡಿದ್ದರು. ‘ಕವಿರತ್ನ ಕಾಳಿದಾಸ’ದ ಕಲಾಧರ, ‘ವೀರಮಣಿ ಕಾಳಗ’ದ ವೀರಮಣಿ, ‘ಭಕ್ತಚಂದ್ರಹಾಸ’ದ ದುಷ್ಪಬುದ್ಧಿ ಅವರಿಗೆ ಪ್ರಿಯವಾದ ಪಾತ್ರಗಳು. ಚಿಟ್ಟಾಣಿ, ಜಲವಳ್ಳಿಯವರಂಥ ಮೇರು ಕಲಾವಿದರ ಜೊತೆಗೆ ಪಾತ್ರ ಮಾಡಿದ ಸಾಂದ್ರ ಅನುಭವ ಅವರಿಗಿದೆ.
ಯಕ್ಷಗಾನ ಕಲಾವಿದರ ಜೊತೆಗೆ ನಿಕಟವಾಗಿ ಒಡನಾಡಿದ್ದರಿಂದ ಅವರು ಕಲಾವಿದರ ಕಷ್ಟಗಳನ್ನು ಅರಿತರು. ಯಕ್ಷಗಾನ ಕಲಾರಂಗದಲ್ಲಿ ‘ಯಕ್ಷನಿಧಿ’ ಘಟಕವನ್ನು ತೆರೆದು, ಕಲಾವಿದರಿಗೆ ಇನ್ಶೂರೆನ್ಸ್, ಮೆಡಿಕೇರ್ ಸೌಲಭ್ಯಗಳನ್ನು ಆರಂಭಿಸಿದರು. ಅಸಂಘಟಿತ ಕಲಾವಿದರಿಗೆ ಸೌಲಭ್ಯವನ್ನು ಕಲ್ಪಿಸಿಕೊಡುವ ಈ ಕಾರ್ಯಕ್ರಮದ ದೇಶದಲ್ಲಿಯೇ ಪ್ರಥಮವಾದದ್ದು. ಮುಂದೆ, ಈ ಸೌಲಭ್ಯವನ್ನು ತಾಂತ್ರಿಕ ಕಾರಣದಿಂದ ಮುಂದುವರಿಸಲಾಗಲಿಲ್ಲ ಎಂಬ ಮಾತು ಬೇರೆ. ಆದರೆ, ಈಗಲೂ ಬಸ್ ಪಾಸ್ ಸೌಲಭ್ಯ, ವಿಳಾಸದ ಡೈರಿ, ಮನೆ ನಿರ್ಮಾಣಕ್ಕೆ ಸಹಾಯ ಇತ್ಯಾದಿಗಳನ್ನು ಒದಗಿಸಲಾಗುತ್ತದೆ. ಕಲಾವಿದರು ಆಸ್ಪತ್ರೆ ಸೇರಿದಾಗ ಮೊದಲು ಫೋನ್ ಮಾಡುವುದು ಮುರಲಿಯವರಿಗೆ. ಇತ್ತೀಚೆಗೆ ಶಶಿಕಾಂತ ಶೆಟ್ಟಿಯವರನ್ನು ಆಸ್ಪತ್ರೆಗೆ ದಾಖಲಿಸುವವರೆಗೂ ಮುರಲಿಯವರಿಂದ ಸಹಾಯವನ್ನು ಪಡೆದ ನೂರಾರು ಕಲಾವಿದರು ಇದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿನಮ್ರ ಸಹಾಯ ಮಾಡುವ ‘ವಿದ್ಯಾಪೋಷಕ್’ ವಿಭಾಗವನ್ನು ಆರಂಭಿಸದವರು ಮುರಲಿಯವರೇ. ಆದರೆ, ಇದಕ್ಕೂ ಯಕ್ಷಗಾನಕ್ಕೂ ನೇರ ಸಂಬಂಧವಿಲ್ಲದಿದ್ದರೂ ಪರೋಕ್ಷವಾಗಿ ನಂಟಿದೆ. ವಿದ್ಯಾಪೋಷಕ್ ವಿದ್ಯಾರ್ಥಿಗಳೊಂದಿಗೆ ಕಲಾವಿದರ ಮಕ್ಕಳಿಗೂ ಸ್ಕಾಲರ್‌ಶಿಪ್ ನೀಡುವ ಯೊಜನೆಯನ್ನು ಮುರಲಿಯವರು ಆರಂಭಿಸಿರುವುದು ಗಮನಾರ್ಹ. ವಿದ್ಯಾಪೋಷಕ್ ಮಕ್ಕಳೊಂದಿಗೆ ಕೆಲವು ಬಡ ಕಲಾವಿದರು ಮನೆ ನಿರ್ಮಿಸಿಕೊಟ್ಟಿರುವುದು ಕೂಡ ಯಕ್ಷಗಾನಕ್ಕೆ ಸಂಬಂಧಿಸಿದ ವಿಚಾರವೇ ಆಗಿದೆ.
ಯಕ್ಷಶಿಕ್ಷಣ ಟ್ರಸ್ಟ್‌ನ್ನು ಆರಂಭಿಸಿ ಅದರ ಕಾರ್ಯದರ್ಶಿಯಾಗಿ ಅದನ್ನು ಮುನ್ನಡೆಸಿದ ಕೀರ್ತಿ ಮುರಲಿ ಕಡೆಕಾರ್ ಅವರದ್ದು. ಯಕ್ಷಶಿಕ್ಷಣದಲ್ಲಿ ಈವರೆಗೆ ಸಿದ್ಧಗೊಂಡ ವಿದ್ಯಾರ್ಥಿಗಳ ಸಂಖ್ಯೆ ಹತ್ತುಸಾವಿರಕ್ಕಿಂತಲೂ ಅಧಿಕವಾಗಿದೆ. ಈ ವರ್ಷವೊಂದರಲ್ಲಿಯೇ ಸುಮಾರು ತೊಂಬತ್ತು ಶಾಲೆಗಳಲ್ಲಿ ಸಾವಿರಾರು ಮಕ್ಕಳು ಯಕ್ಷಗಾನ ಕಲಿಯುತ್ತಿದ್ದಾರೆ. ಅವರ ಯಕ್ಷಕಿಶೋರ ಯಕ್ಷಗಾನ ಪ್ರದರ್ಶನ ಕಲ್ಪನೆ ಕೂಡ ಮುರಲಿಯವರದ್ದೇ ಆಗಿದೆ.
ಹೀಗೆ ಮುರಲಿಯವರು ಪ್ರಸಿದ್ಧ ಕಲಾವಿದರೂ ಹೌದು, ಕಲೋಪಾಸಕರೂ ಹೌದು. ಸಹೃದಯ ಯಕ್ಷಗಾನ ಸಂಘಟಕರೂ ಹೌದು. ಯಕ್ಷಗಾನ ಸರ್ವಅಂಗಗಳ ಅನುಭವವವಿರುವ ಅವರು ಸೂಕ್ಷ್ಮ ಮತಿಯ ಯಕ್ಷಗಾನ ವಿಮರ್ಶಕರೂ ಹೌದು. ಇಂಥ ಸಾಧಕರಿಗೆ ಪ್ರಶಸ್ತಿ ನೀಡುವ ಗೌರವಿಸುತ್ತಿರುವ ಕರ್ನಾಕಟ ಯಕ್ಷಗಾನ ಅಕಾಡೆಮಿಯನ್ನು ಅಭಿನಂದಿಸಬೇಕಾಗಿದೆ.




