ಕಾಪು: ಕಾಪು ಪೇಟೆಯ ಖಾಸಗಿ ಕಟ್ಟಡವೊಂದರ ಮುಂಭಾಗದಲ್ಲಿರುವ ರಿಕ್ಷಾ ನಿಲ್ದಾಣವನ್ನು ತೆರವುಗೊಳಿಸುವಂತೆ ಹೈಕೋರ್ಟ್ ಆದೇಶ ನೀಡಿದೆ.
ಅದರಂತೆ ಪುರಸಭೆಯು ರಿಕ್ಷಾ ನಿಲ್ದಾಣ ತೆರವಿಗೆ ಮುಂದಾಗಿದ್ದು ಪುರಸಭೆಯ ಕ್ರಮಕ್ಕೆ ರಿಕ್ಷಾ ಚಾಲಕರಿಂದ ಭಾರೀ ಆಕ್ಷೇಪ ವ್ಯಕ್ತವಾಗಿದೆ.
ಕಾಪು ಪೇಟೆಯಲ್ಲಿ ಖಾಸಗಿ ಕುಟುಂಬಕ್ಕೆ ಸೇರಿದ ಜಾಗ ಮತ್ತು ಕಟ್ಟಡದ ಮುಂಭಾಗದಲ್ಲಿರುವ ರಿಕ್ಷಾ ನಿಲ್ದಾಣದಿಂದಾಗಿ ಅಂಗಡಿಯಲ್ಲಿರುವ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಖಾಸಗಿಯವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್ ಅವರ ಪರವಾಗಿ ತೀರ್ಪು ನೀಡಿ ರಿಕ್ಷಾ ನಿಲ್ದಾಣವನ್ನು ತೆರವುಗೊಳಿಸುವಂತೆ ಸೂಚನೆ ನೀಡಿತ್ತು.
ಹೈಕೋರ್ಟ್ ನೀಡಿರುವ ಆದೇಶದಂತೆ ಕಾಪು ಪುರಸಭೆಯು ರಿಕ್ಷಾ ನಿಲ್ದಾಣ ತೆರವುಗೊಳಿಸುವ ವಿಚಾರದಲ್ಲಿ ಚರ್ಚಿಸಲು ಮತ್ತು ಆದೇಶ ಜಾರಿಯ ಕುರಿತಾಗಿ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ಪ್ರತಿನಿಧಿಗಳಿಗೆ ನೋಟಿಸ್ ಜಾರಿ ಮಾಡಿತ್ತು.
ಏಕಾಏಕಿ ಬಂದ ಹೈಕೋರ್ಟ್ ನ ಆದೇಶದಿಂದ ಗಲಿಬಿಲಿಗೊಂಡ ಕಾಪು ಪೇಟೆಯ ಎಲ್ಲಾ ರಿಕ್ಷಾ ಚಾಲಕರು ರಿಕ್ಷಾ ಸಮೇತವಾಗಿ ಪುರಸಭೆಗೆ ಆಗಮಿಸಿ, ಮುತ್ತಿಗೆ ಹಾಕಲು ಮುಂದಾದದರು. ಇದರಿಂದಾಗಿ ಪುರಸಭೆ ಮುಂಭಾಗ ಕೆಲಕಾಲ ಗೊಂದಲ ಉಂಟಾಯಿತು.
ರಿಕ್ಷಾ ಚಾಲಕರು ರಿಕ್ಷಾ ಸಮೇತ ಪುರಸಭೆಗೆ ಆಗಮಿಸಿದ್ದನ್ನು ಗಮನಿಸಿದ ಪುರಸಭೆ ಮುಖ್ಯಾಧಿಕಾರಿ, ಅವರನ್ನು ಸಂತೈಸಲು ಪ್ರಯತ್ನಿಸಿದ್ದು ಸಾರ್ವಜನಿಕರಿಗೆ ತೊಂದರೆಯಾಗ ಬಾರದೆಂಬ ದೃಷ್ಟಿಯಿಂದ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು ರಿಕ್ಷಾ ಚಾಲಕರ ಮನವೊಲಿಸಿ, ವಾಪಸ್ಸು ಕಳುಹಿಸಿದ್ದರು. ಬಳಿಕ ರಿಕ್ಷಾ ಚಾಲಕರು ರಿಕ್ಷಾ ಸಮೇತವಾಗಿ ಕಾಪು ಪೇಟೆಗೆ ತೆರಳಿ ನಿಲ್ದಾಣದ ಮುಂಭಾಗ ರಿಕ್ಷಾಗಳನ್ನು ಇರಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು. ಬಾಡಿಗೆ ನಡೆಸದೇ ಮೌನ ಪ್ರತಿಭಟನೆಗೆ ಮುಂದಾದರು. ಹೈಕೋರ್ಟ್ ಆದೇಶಕ್ಕೆ ಗೌರವ ಸೂಚಿಸುತ್ತೇವೆ. ಆದರೆ ನಮಗೆ ಯಾವುದೇ ನೋಟೀಸ್ ನೀಡದೇ ಈ ರೀತಿ ರಿಕ್ಷಾ ನಿಲ್ದಾಣ ತೆರವಿಗೆ ಮುಂದಾಗಿರುವುದು ಬೇಸರ ತಂದಿದೆ. ಪಿಡಬ್ಲೂಡಿ ರಸ್ತೆಯಲ್ಲಿರುವ ಪೇಟೆಯ ರಿಕ್ಷಾ ನಿಲ್ದಾಣ ತೆರವಿಗಾಗಿ ಹೈಕೋರ್ಟ್ ಆದೇಶಿಸಿದ್ದು, ಪುರಸಭೆ, ಜಿಲ್ಲಾಧಿಕಾರಿ, ಆರ್.ಟಿ.ಒ ಗೆ ನೊಟೀಸ್ ಜಾರಿ ಮಾಡಿರುವುದರ ವಿರುದ್ಧ ನಾವು ಹೈಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದೇವೆ ಎಂದು ರಿಕ್ಷಾ ಯೂನಿಯನ್ ಮುಖಂಡರು ತಿಳಿಸಿದ್ದಾರೆ.



