ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ–66ರ ಮುರ್ಡೇಶ್ವರ ಸಮೀಪದ ಬಸ್ತಿ–ಕಾಯ್ಕಿಣಿ ಭಾಗದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರರೊಬ್ಬರು ಲಾರಿ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ರಸ್ತೆ ಕಾಮಗಾರಿಯ ಅವೈಜ್ಞಾನಿಕ ನಿರ್ವಹಣೆಯೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಿದ ಸ್ಥಳೀಯರು ಮೃತದೇಹ ತೆರವುಗೊಳಿಸಲು ಅವಕಾಶ ನೀಡದೆ ಕೆಲಕಾಲ ಹೆದ್ದಾರಿಯಲ್ಲೇ ಪ್ರತಿಭಟನೆ ನಡೆಸಿದರು.
ಮೃತರನ್ನು ಕಾಯ್ಕಿಣಿ ಸಭಾತೀಯದ ನಿವಾಸಿ ಕೃಷ್ಣ ಶನಿಯಾರ ನಾಯ್ಕ (53) ಎಂದು ತಿಳಿಯಲಾಗಿದೆ. ಅವರು ಸಾರದೊಳೆ ಹಳೆಕೋಟೆ ಹನುಮಂತ ದೇವಾಲಯದ ಆಡಳಿತ ಮಂಡಳಿಯ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಮಂಗಳೂರಿನಿಂದ ಬೆಳಗಾವಿ ಕಡೆಗೆ ತೆರಳುತ್ತಿದ್ದ ಲಾರಿಯು ಬಸ್ತಿ–ಕಾಯ್ಕಿಣಿ ಭಾಗದ ತಿರುವಿನಲ್ಲಿ ನಿಂತಿದ್ದ ಕಾರನ್ನು ತಪ್ಪಿಸಲು ಯತ್ನಿಸಿದ ವೇಳೆ ನಿಯಂತ್ರಣ ತಪ್ಪಿದೆ. ಬಳಿಕ ಡಿವೈಡರ್‌ಗೆ ಡಿಕ್ಕಿ ಹೊಡೆದ ಲಾರಿ ರಸ್ತೆ ಬದಿಯಲ್ಲಿ ನಿಂತಿದ್ದ ಸ್ಕೂಟರ್‌ಗೆ ಅಪ್ಪಳಿಸಿ, ಕೃಷ್ಣ ನಾಯ್ಕ ಅವರ ಮೇಲೆ ಹರಿದಿದೆ. ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ತೀವ್ರತೆಗೆ ಲಾರಿಯ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.
ಘಟನೆಯ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ಸ್ಥಳೀಯರು, ಹೆದ್ದಾರಿ ಕಾಮಗಾರಿ ಕಳಪೆ ಗುಣಮಟ್ಟದಲ್ಲಿದ್ದು ರಸ್ತೆ ವಿನ್ಯಾಸದ ದೋಷಗಳಿಂದ ಈ ಭಾಗದಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ ಎಂದು ಆರೋಪಿಸಿದರು. ಸಂಬಂಧಿತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೆ ಮೃತದೇಹ ಹಾಗೂ ಅಪಘಾತಕ್ಕೀಡಾದ ವಾಹನವನ್ನು ಸ್ಥಳಾಂತರಿಸಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು. ಇದರಿಂದ ಕೆಲಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
ಮಾಹಿತಿ ತಿಳಿಯುತ್ತಿದ್ದಂತೆ ಮುರ್ಡೇಶ್ವರ ಹಾಗೂ ಭಟ್ಕಳ ಪೊಲೀಸ್ ಠಾಣೆಗಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು. ಬಳಿಕ ಭಟ್ಕಳ ಡಿವೈಎಸ್‌ಪಿ, ಪೊಲೀಸ್ ಅಧಿಕಾರಿಗಳು, ಸಹಾಯಕ ಆಯುಕ್ತರು ಹಾಗೂ ತಹಸೀಲ್ದಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು.
ಈ ವೇಳೆ ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ಸಂಸ್ಥೆಯ ಎಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ, ರಸ್ತೆ ಸುರಕ್ಷತೆ ಹೆಚ್ಚಿಸಲು ಹಾಗೂ ಅಪಘಾತಗಳನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಧಿಕಾರಿಗಳ ಮನವೊಲಿಕೆಯ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಯಿತು. ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





