Home Crime ಅಪ್ರಾಪ್ತೆಯ ಅತ್ಯಾಚಾರ ಪ್ರಕರಣ : ಅಪರಾಧಿಗಳಿಗೆ ಗಲ್ಲುಶಿಕ್ಷೆ ಖಾಯಂ : ಹೈಕೋರ್ಟ್…!!

ಅಪ್ರಾಪ್ತೆಯ ಅತ್ಯಾಚಾರ ಪ್ರಕರಣ : ಅಪರಾಧಿಗಳಿಗೆ ಗಲ್ಲುಶಿಕ್ಷೆ ಖಾಯಂ : ಹೈಕೋರ್ಟ್…!!

ಮಂಗಳೂರು : ವಾಮಂಜೂರಿನ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ ಅಮಾನುಷ ಪ್ರಕರಣದಲ್ಲಿ ಮೂವರು ಅಪರಾಧಿಗಳಿಗೆ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಹೈಕೋರ್ಟ್ ದೃಢೀಕರಿಸಿದೆ.

ಶಿಕ್ಷೆಯ ಪ್ರಮಾಣ ಕಡಿಮೆ ಮಾಡಿದ್ದೇ ಆದರೆ ಇಂತಹ ಕ್ರೂರ ಕೃತ್ಯಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಮತ್ತು ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ವಿಚಾರಣ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ದೃಢೀಕರಿಸುವಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ಜೊತೆಗೆ, ಶಿಕ್ಷೆ ರದ್ದುಪಡಿಸುವಂತೆ ಅಪರಾಧಿಗಳಾದ ಮಧ್ಯಪ್ರದೇಶದ ಜೈಬನ್ ಆದಿವಾಸಿ, ಮುಕೇಶ್ ಸಿಂಗ್ ಹಾಗೂ ಝಾರ್ಖಂಡ್‌ನ ಮನೀಶ್ ತಿರ್ಕಿ ಸಲ್ಲಿಸಿದ್ದ ಮೇಲ್ಮನವಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.

ನ್ಯಾಯಪೀಠ ತನ್ನ ಆದೇಶದಲ್ಲಿ, ಸಂತ್ರಸ್ತೆಯ ಜೀವವನ್ನು ಲೆಕ್ಕಿಸದೇ ಒಬ್ಬರ ನಂತರ ಮತ್ತೊಬ್ಬರು ಅತ್ಯಾಚಾರ ಎಸಗಿದ್ದು, ಇದು ಅಪರಾಧವಲ್ಲ, ಇಡೀ ಸಮಾಜದ ಆತ್ಮಸಾಕ್ಷಿಗೆ ಆಘಾತ ಉಂಟು ಮಾಡಿದ ಕೃತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಇಂತಹ ಕ್ರೂರ ಕೃತ್ಯಗಳಲ್ಲಿ ಗಲ್ಲು ಶಿಕ್ಷೆ ನೀಡುವುದು ಸಮಂಜಸ ಎಂದು ನ್ಯಾಯಾಲಯ ತಿಳಿಸಿದೆ. ಸಂತ್ರಸ್ತೆ ಕೇವಲ 7-8 ವರ್ಷದ ಬಾಲಕಿಯಾಗಿದ್ದು, ಆರೋಪಿಗಳ ಮೇಲೆ ನಂಬಿಕೆ ಇಟ್ಟಿದ್ದಳು. ಅದನ್ನೇ ದುರುಪಯೋಗಪಡಿಸಿಕೊಂಡ ಆರೋಪಿಗಳು ತಿಂಡಿ ಕೊಡಿಸುವ ನೆಪದಲ್ಲಿ ಆಕೆಯನ್ನು ಕರೆದುಕೊಂಡು ಹೋಗಿ ತಮ್ಮ ಕಾಮತೃಷೆಯನ್ನು ತೀರಿಸಿಕೊಂಡಿದ್ದಾರೆ ಎಂದು ನ್ಯಾಯಪೀಠ ಹೇಳಿದೆ.

ವೈದ್ಯಕೀಯ ವರದಿಯ ಪ್ರಕಾರ ಸಂತ್ರಸ್ತೆಯ ಖಾಸಗಿ ಅಂಗಗಳಲ್ಲಿ ಗಂಭೀರ ಗಾಯಗಳಾಗಿದ್ದು, ಅತೀವ ರಕ್ತಸ್ರಾವವಾಗಿದ್ದುದೂ ದೃಢಪಟ್ಟಿದೆ.