Home Latest ಕೊರಗರಿಗೆ ಕಾದಿಟ್ಟ ಭೂಮಿ ಮಂಜೂರು ಮಾಡುವಂತೆ ಆಗ್ರಹಿಸಿ ಹಕ್ಕೊತ್ತಾಯ ಧರಣಿ..!!

ಕೊರಗರಿಗೆ ಕಾದಿಟ್ಟ ಭೂಮಿ ಮಂಜೂರು ಮಾಡುವಂತೆ ಆಗ್ರಹಿಸಿ ಹಕ್ಕೊತ್ತಾಯ ಧರಣಿ..!!

ಉಡುಪಿ: ಜಿಲ್ಲೆಯಲ್ಲಿರುವ ಮೂಲನಿವಾಸಿಗರಾದ ಹಾಗೂ ಭೂ ಹೀನರಾದ 13 ಕೊರಗ ಕುಟುಂಬಗಳಿಗೆ 10.67ಎಕರೆ ಭೂಮಿಯನ್ನು ಕಾದಿಡಲಾಗಿದೆ. ಅವರ ಹಕ್ಕಿಗೆ ಅನುಗುಣವಾಗಿ ಕೂಡಲೇ ಹಕ್ಕುಪತ್ರ ನೀಡಿ ನೊಂದ ಕುಟುಂಬಗಳಿಗೆ ಭೂನ್ಯಾಯ ಒದಗಿಸಬೇಕು. ಅದನ್ನು ಅನ್ಯ ಇಲಾಖೆ ಅಥವಾ ಬಲಾಢ್ಯರು ಕಬಳಿಸಲು ಅವಕಾಶ ನೀಡಬಾರದು ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಆಗ್ರಹಿಸಿದರು.

ಉಡುಪಿಯ ಜಿಲ್ಲಾಧಿಕಾರಿ ಕಚೇರಿಯ ಬಳಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಉಡುಪಿ ಜಿಲ್ಲಾ ಸಂಘಟನಾ ವತಿಯಿಂದ ಸೋಮವಾರ (ಜು.13) ಆಯೋಜಿಸಿದ್ದ ಧರಣಿಯಲ್ಲಿ ಮಾತನಾಡಿದರು.

ಕುಂದಾಪುರ ತಾಲೂಕಿನ ಆಲೂರು ಹಾಗೂ ಹರ್ಕೂರು ಗ್ರಾಮದ ಭೂಹೀನ ಕೊರಗ ಕುಟುಂಬಗಳಿಗೆ ಈಗಾಗಲೇ ಗುರುತಿಸಿರುವ ಭೂಮಿ ಮಂಜೂರು ಮಾಡಬೇಕು. ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಆಧಾರ ರಹಿತ ಆಕ್ಷೇಪ ತಿರಸ್ಕರಿಸಬೇಕು. ಜಿಲ್ಲಾ ಮಟ್ಟದಲ್ಲಿಯೇ ಆಡಳಿತಾತ್ಮಕ ನಿರ್ಧಾರ ಕೈಗೊಂಡು ಸಾಮಾಜಿಕ ನ್ಯಾಯ ಒದಗಿಸಬೇಕು. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಉಡುಪಿ ಜಿಲ್ಲಾ ಸಮಿತಿ ಸಂಚಾಲಕ ಶ್ರೀಧರ್ ನಾಡ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಎಚ್.ನರಸಿಂಹ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಗಣೇಶ್ ಆಲೂರು, ಕೊರಗ ನಾರ್ಕಳ, ರೇಶ್ಮಾ ನಾಡ, ದಾರು ನಾರ್ಕಳ, ಸಂಜೀವ ಕಾರೆಬೈಲು, ಸುಧಾಕರ್ ಕಾರೆಬೈಲು, ಕೃಷ್ಣ ಇನ್ನಾ, ತುಳಸಿ ಇತರರು ಉಪಸ್ಥಿತರಿದ್ದರು