Home Latest ಉಡುಪಿ ರಾಜಾಂಗಣದಲ್ಲಿ ನಡೆದ ಹರಿಕಥಾ ಕಾರ್ಯಕ್ರಮ ದಲ್ಲಿ ಶಂಕರಾಚಾರ್ಯರಿಗೆ ನಿಂದನೆ : ಕ್ಷಮೆ ಯಾಚನೆ..!!

ಉಡುಪಿ ರಾಜಾಂಗಣದಲ್ಲಿ ನಡೆದ ಹರಿಕಥಾ ಕಾರ್ಯಕ್ರಮ ದಲ್ಲಿ ಶಂಕರಾಚಾರ್ಯರಿಗೆ ನಿಂದನೆ : ಕ್ಷಮೆ ಯಾಚನೆ..!!

ಉಡುಪಿ: ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯರನ್ನು ನಿಂದಿಸಿದ ಘಟನೆ ನಡೆದಿದ್ದು, ಆ ವೀಡಿಯೊ ವೈರಲ್ ಆಗಿತ್ತು. ಬಳಿಕ ಶ್ರೀ ಶಂಕರರ ಅನುಯಾಯಿಗಳು ನಿಂದನೆ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿ, ಕಾನೂನು ಹೋರಾಟದ ಎಚ್ಚರಿಕೆಯನ್ನೂ ನೀಡಿದ್ದರು.

ಇದೀಗ ಶಂಕರರನ್ನು ಅವಮಾನಿಸಿದ್ದವರು ಕ್ಷಮೆ ಯಾಚಿಸಿದ್ದು, ಪ್ರಕರಣ ಅಂತ್ಯಗೊಳಿಸಲಾಗಿದೆ.

ಶೀರೂರು ಮಠದ ಪರ್ಯಾಯದ ನಿಮಿತ್ತ ನಿತ್ಯವೂ ರಾಜಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದು, ಜು.11ರಂದು ಸಂಜೆ ಮಹಿಳೆಯರೀರ್ವರು ಹರಿಕಥಾ ಕಾರ್ಯಕ್ರಮ ನಡೆಸಿದ್ದರು. ಅಲ್ಲಿ ಆಚಾರ್ಯ ಮಧ್ವರ ಕಥೆ ಹೇಳುವ ಸಂದರ್ಭದಲ್ಲಿ ಜಗದ್ಗುರು ಶಂಕರಾಚಾರ್ಯರ ಕುರಿತಾಗಿ ಅಸಾಂವಿಧಾನಿಕ ಶಬ್ದ ಬಳಸಿ ಅವಹೇಳನಕಾರಿಯಾಗಿ ಮಾತನಾಡಿದ್ದರು.

ಅದು ಶಂಕರರ ಅನುಯಾಯಿಗಳನ್ನು ಹಾಗೂ ಹಿಂದೂಪರ ಹೋರಾಟಗಾರರನ್ನು ಕೆರಳಿಸಿತ್ತು.

ಕಾರ್ಯಕ್ರಮದ ಸಂಘಟಕರು ಕ್ಷಮೆ ಕೇಳಬೇಕು. ಇಂಥ ಘಟನೆಗಳು ಮುಂದೆ ನಡೆಯದಂತೆ ಎಚ್ಚರ ವಹಿಸಬೇಕು. ಈ ಕುರಿತು ಪರ್ಯಾಯ ಶೀರೂರು ಮಠದವರು ಸ್ಪಷ್ಟನೆ ಕೊಡಬೇಕು. ಇಲ್ಲದಿದ್ದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ವಿ.ಎಸ್. ರಾಘವೇಂದ್ರ ಭಟ್ ಎಂಬವರು ಎಚ್ಚರಿಕೆ ನೀಡಿದ್ದರು.

ತಾವು ನಡೆಸಿಕೊಟ್ಟ ಹರಿಕಥೆಯಲ್ಲಿ ಶ್ರೀ ಶಂಕರಾಚಾರ್ಯರ ಅವಹೇಳನವಾಗಿದೆ ಎಂದು ಅರಿತ ಮಹಿಳೆಯರೀರ್ವರು ಕ್ಷಮೆ ಯಾಚಿಸಿದ್ದಾರೆ. ನಾವು ಕಲಾವಿದರು. ಹರಿಕಥೆ ನಡೆಸುತ್ತಿರುವಾಗ ಆ ಪುಸ್ತಕದಲ್ಲಿ ಇದ್ದುದ್ದನ್ನು ಓದಿದ್ದೇವೆಯೇ ಹೊರತು ಬೇರಾವುದನ್ನೂ ಹೇಳಿಲ್ಲ. ಯಾವ ಮತದವರನ್ನೂ ನೋಯಿಸುವ ಉದ್ದೇಶ ತಮಗಿಲ್ಲ. ಇದರಲ್ಲಿ ಉಡುಪಿ ಮಠದ ಅಥವಾ ಶೀರೂರು ಮಠದ ಯಾವುದೇ ತಪ್ಪಿಲ್ಲ. ನಮ್ಮಿಂದಲೇ ಆದ ಪ್ರಮಾದಕ್ಕೆ ಕ್ಷಮೆ ಯಾಚಿಸುತ್ತೇವೆ ಎಂದು ವಿಡಿಯೋ ತುಣುಕಿನ ಮೂಲಕ ಮಹಿಳೆ ಕ್ಷಮೆ ಯಾಚಿಸಿದ್ದಾಳೆ.

ಉಡುಪಿ ಶ್ರೀಕೃಷ್ಣ ಮಠದ ಹಾಗೂ ಪರ್ಯಾಯ ಶೀರೂರು ಮಠದ ಸುಪರ್ದಿಗೆ ಒಳಪಟ್ಟ ರಾಜಾಂಗಣದಲ್ಲಿ ಜು.11ರಂದು ಅಂಕಿತಾ ನಾಯ್ಕ್ ಮತ್ತು ಗೌರಿ ಪಾಂಡುರಂಗಿ ಎಂಬವರು ಒಂದು ಗಂಟೆಯ ಭರತನಾಟ್ಯ ಕಾರ್ಯಕ್ರಮ ಹಾಗೂ ಒಂದು ಗಂಟೆಯ ಹರಿವಾಣ ಸೇವೆ ನಡೆಸಲು ನಮ್ಮಿಂದ ಅನುಮತಿ ಪಡೆದಿದ್ದರು. ಅವರ ಕಾರ್ಯಕ್ರಮದ ನಡುವೆ ‘ಭಕ್ತ ಪ್ರಹ್ಲಾದ’ ಎಂಬ ಹರಿಕಥೆಯನ್ನು ಪ್ರಸ್ತುತಿಗೊಳಿಸಿದ್ದರು. ಆ ಸಂದರ್ಭದಲ್ಲಿ ಶ್ರೀ ಶಂಕರಾಚಾರ್ಯರ ಕುರಿತಾಗಿ ಅವಹೇಳನಕಾರಿ ಪದ ಬಳಸಿದ್ದರು. ಕಾರ್ಯಕ್ರಮದ ಬಳಿಕ ಈ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಕೂಡಲೇ ಆ ಮಹಿಳೆಯರಿಬ್ಬರಿಗೆ ಸಾರ್ವಜನಿಕವಾಗಿ ಕ್ಷಮೆ ಕೇಳಲು ಸೂಚಿಸಿದ್ದು, ಅದರಂತೆ ವಿಡಿಯೋ ತುಣುಕು ಮೂಲಕ ಕ್ಷಮೆಯಾಚಿಸಿದ್ದಾರೆ. ಈ ಅನಪೇಕ್ಷಿತ ಘಟನೆಯ ಬಗ್ಗೆ ಶ್ರೀಮಠವು ವಿಷಾದ ವ್ಯಕ್ತಪಡಿಸುತ್ತದೆ ಎಂದು ಮಠದ ದಿವಾನ ಡಾ.ಉದಯಕುಮಾರ್ ಸರಳತ್ತಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ