ಉಡುಪಿ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ವ್ಯಕ್ತಿಯೊಬ್ಬರಿಗೆ ಫೆಸ್ ಬುಕ್ ಲಿಂಕ್ ನಲ್ಲಿ ಲಕ್ಷಾಂತರ ರೂಪಾಯಿ ವಂಚನೆಯಾದ ಘಟನೆ ನಡೆದಿದೆ.
ವಂಚನೆಯಾದ ವ್ಯಕ್ತಿ ತಲ್ಲೂರು ನಿವಾಸಿ ರಘುರಾಮ್ ಶೆಟ್ಟಿ ಎಂದು ತಿಳಿದು ಬಂದಿದೆ.
ಈ ಘಟನೆ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ಸಾರಾಂಶ : ಫಿರ್ಯಾದಿ ಹೆಚ್ ರಘುರಾಮ ಶೆಟ್ಟಿ (72) ವಾಸ: ತಲ್ಲೂರು, ಕುಂದಾಪುರ ತಾಲೂಕು ಇವರು ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿದ್ದು, ದಿನಾಂಕ: 28/11/2025 ರಂದು ಫೇಸ್-ಬುಕ್ ನಲ್ಲಿ ನಿವೃತ್ತ ಬ್ಯಾಂಕ್ ಉದ್ಯೋಗಿಗಳಿಗೆ ಬ್ಯಾಂಕ್ ಆಫ್ ಬರೋಡದಿಂದ ವಿವಿಧ ಸವಲತ್ತುಗಳನ್ನು ಒದಗಿಸುವ ಕಾರ್ಡ್ ಕುರಿತಾಗಿನ ಜಾಹೀರಾತೊಂದನ್ನು ನೋಡಿ ಅದರಲ್ಲಿದ್ದ ಲಿಂಕ್ ಅನ್ನು ಒಪನ್ ಮಾಡಿದ್ದು, ಆನಂತರದಲ್ಲಿ ದಿನಾಂಕ: 29/11/2025 ಫಿರ್ಯಾದಿದಾರರ ಮೊಬೈಲ್ ಗೆ ಅಪರಿಚಿತ ಮೊಬೈಲ್ ನಂಬ್ರದಿಂದ ಕರೆ ಬಂದಿದ್ದು ಕರೆ ಸ್ವೀಕರಿಸಿದಾಗ ಆತ ತನ್ನನ್ನು ಬ್ಯಾಂಕ್ ಆಫ್ ಬರೋಡ ಅಲ್ಕಾಪುರಿ, ಗುಜರಾತ್ ನಿಂದ ಮಾತನಾಡುತ್ತಿರುವುದಾಗಿ ತಿಳಿಸಿದ್ದು, ಹಿಂದಿನ ದಿನ ಫಿರ್ಯಾದಿದಾರರು ಫೇಸ್-ಬುಕ್ ನಲ್ಲಿ ಕ್ಲಿಕ್ ಮಾಡಿರುವ ಜಾಹೀರಾತಿನ ಲಿಂಕ್ ನ ಬಗ್ಗೆ ತಿಳಿಸಿದ್ದು ಹಾಗೂ ಸದ್ರಿ ಲಿಂಕ್‌ನಲ್ಲಿರುವ ಕಾರ್ಡ್ ಅನ್ನು ಹಾಗೂ ಅದರ ಉಪಯೋಗವನ್ನು ಪಡೆದುಕೊಳ್ಳಲು ಫೇಸ್-ಬುಕ್ ನಲ್ಲಿನ ಲಿಂಕ್ ಕ್ಲಿಕ್ ಮಾಡಿ ಫಿರ್ಯಾದಿದಾರರ ಬ್ಯಾಂಕ್ ಖಾತೆ ವಿವರ, ಮೊಬೈಲ್ ನಂಬ್ರ, ಈ-ಮೇಲ್ ಹಾಗೂ ಇತರೆ ವೈಯುಕ್ತಿಕ ವಿವರಗಳನ್ನು ಭರ್ತಿಗೊಳಿಸುವಂತೆ ತಿಳಿಸಿದ್ದು, ಅದರಂತೆ ಫಿರ್ಯಾದಿದಾರರು ವಿವರ ಭರ್ತಿಗೊಳಿಸಿ ಹಾಗೂ ಬ್ಯಾಂಕ್ ಒ.ಟಿ.ಪಿ ಯನ್ನು ಅಪರಿಚಿತನೊಂದಿಗೆ ಹಂಚಿಕೊಂಡಿದ್ದು, ಆನಂತರದಲ್ಲಿ ಫಿರ್ಯಾದಿದಾರರ ಬ್ಯಾಂಕ್ ಖಾತೆ ಯಿಂದ ರೂ. 5,75,003.54/- ರೂ.3,59,013.08/-, ರೂ.7,96,021.16, ರೂ.3,98,018.08/- ರಂತೆ ಒಟ್ಟು ರೂ.21,28,055.86/- ಅನ್ನು ದಿನಾಂಕ:29/11/2025 ರಂದು ಫಿರ್ಯಾದಿದಾರರ ಬ್ಯಾಂಕ್ ಖಾತೆಯಿಂದ ವರ್ಗಾಯಿಸಿಕೊಂಡು ಪಿರ್ಯಾದಿದಾರರಿಗೆ ಮೋಸ ವಂಚನೆಯಿಂದ ನಷ್ಟ ಉಂಟು ಮಾಡಿರುತ್ತಾರೆ.
ಈ ಬಗ್ಗೆ ಸೆನ್ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 62/2025, ಕಲಂ: 66(ಸಿ), 66(ಡಿ) ಐ.ಟಿ. ಆಕ್ಟ್. & ಕಲಂ 318(4) BNS ರಂತೆ ಪ್ರಕರಣ ದಾಖಲಾಗಿರುತ್ತದೆ.



