ಉಡುಪಿ: ದೇಶದ ಸಮುದ್ರ ಗಡಿಯನ್ನು ಸುರಕ್ಷಿತವಾಗಿರಿಸಲು ಹಾಗೂ ಕರಾವಳಿ ಪ್ರದೇಶದ ಆಂತರಿಕ ಭದ್ರತೆಯನ್ನು ಇನ್ನಷ್ಟು ಬಲಪಡಿಸಲು ಕರಾವಳಿ ಕಾವಲು ಪೊಲೀಸ್ ಸಿಬ್ಬಂದಿ ಸ್ಥಳೀಯ ಮೀನುಗಾರರೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಬೇಕು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಹೇಳಿದರು.
ಮಲ್ಪೆಯ ಕರಾವಳಿ ಕಾವಲು ಪೊಲೀಸ್ ಕೇಂದ್ರ ಕಚೇರಿಯಲ್ಲಿ ಕರ್ನಾಟಕದ ಆಂತರಿಕ ಭದ್ರತಾ ವಿಭಾಗದ ಅಧೀನದ ಕರಾವಳಿ ಭದ್ರತಾ ತರಬೇತಿ ಸಂಸ್ಥೆ (CoSTI) ವತಿಯಿಂದ ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕರಾವಳಿ ಕಾವಲು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಆಯೋಜಿಸಿದ್ದ ತರಬೇತಿ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮುದ್ರ ಮಾರ್ಗದ ಮೂಲಕ ನಡೆಯಬಹುದಾದ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವುದು, ಅನುಮಾನಾಸ್ಪದ ದೋಣಿಗಳ ಮೇಲೆ ನಿಗಾ ವಹಿಸುವುದು ಹಾಗೂ ನುಸುಳುಕೋರರು ದೇಶದೊಳಗೆ ಪ್ರವೇಶಿಸದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವುದು ಕರಾವಳಿ ಕಾವಲು ಪೊಲೀಸ್ ಪಡೆಯ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಕರ್ತವ್ಯ ನಿರ್ವಹಿಸುವ ವೇಳೆ ಸ್ಥಳೀಯ ಮೀನುಗಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಸಮುದ್ರ ಅಥವಾ ಕರಾವಳಿ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುವ ದೋಣಿಗಳು ಅಥವಾ ವ್ಯಕ್ತಿಗಳು ಕಂಡುಬಂದರೆ ತಕ್ಷಣ ಪರಿಶೀಲನೆ ನಡೆಸಿ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ಕರಾವಳಿ ಭದ್ರತೆಯಲ್ಲಿ ಸಾರ್ವಜನಿಕರ, ಅದರಲ್ಲೂ ಮೀನುಗಾರರ ಸಹಕಾರ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಕೆ.ಎಲ್. ಗಣೇಶ್, ಹೆಜಮಾಡಿ ಠಾಣೆ ಸಿಪಿಐ ರತ್ನಕುಮಾರ್, ಮೀಸಲು ಪಡೆಯ ಸಿಪಿಐ ಮೂರ್ತಿ ನಾಯ್ಕ, ಗುಪ್ತ ವಾರ್ತೆ ವಿಭಾಗದ ಸಿಪಿಐ ಸೀತಾರಾಮ ಹಾಗೂ ಮುಖ್ಯ ತರಬೇತುದಾರ ಆರ್.ಜಿ. ಬಿರಾದಾರ ಉಪಸ್ಥಿತರಿದ್ದರು. ಎಂಎಸ್‌ಐ ಶಶಿಧರ ಸ್ವಾಗತಿಸಿದರು. ಎಂಎಸ್‌ಐ ಭಾಸ್ಕರ್ ಶೆಟ್ಟಿಗಾರ್ ವಂದಿಸಿದರು.




