ಮಂಗಳೂರು : ಕೋರಿಯರ್ ಮೂಲಕ ನಿಷೇಧಿತ ಮಾದಕವಸ್ತು ಎಂಡಿಎಂಎ ಸಾಗಾಟ ಮತ್ತು ಮಾರಾಟ ಮಾಡಲು ಸಂಚು ರೂಪಿಸುತ್ತಿದ್ದ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದು, 1.58 ಕೋಟಿ ರೂ. ಮೌಲ್ಯದ 1 ಕೆಜಿ 796.96 ಗ್ರಾಂ ಎಂಡಿಎಂಎ ವಶ ಪಡಿಸಿಕೊಂಡಿದ್ದಾರೆ.
ಕಾಸರಗೋಡು ಜಿಲ್ಲೆಯ ಮಂಗಳ್ಪಾಡಿ ನಿವಾಸಿ ಅಬ್ದುಲ್ ಹಾಪೀಲ್(25), ಮಂಗಳೂರಿನ ಕೂಳೂರು, ಕಸಬಾ ಬೆಂಗ್ರೆ ನಿವಾಸಿ ಜಿಯಾವುಲ್ ಹಕ್(30), ಮಂಗಳೂರಿನ ಜಲ್ಲಿಗುಡ್ಡೆ ಬಜಾಲ್ ಮೂಲದ ಪ್ರಸ್ತುತ ಮಂಗಳೂರಿನ ಪಾಂಡೇಶ್ವರ ನಿವಾಸಿ ಅಲ್ತಾಫ್(28) ಬಂಧಿತ ಆರೋಪಿಗಳು.
ಮಂಗಳೂರು ನಗರದಲ್ಲಿ ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ನಿಷೇಧಿತ ಮಾದಕವಸ್ತು ಎಂಡಿಎಂಎ ಮಾರಾಟ ಮಾಡುತ್ತಿರುವ ಬಗ್ಗೆ ಮಂಗಳೂರು ಸಿಸಿಬಿ ಪೊಲೀಸರು ಖಚಿತ ಮಾಹಿತಿ ದೊರೆತಿದೆ. ಮಾಹಿತಿ ಮೆರೆಗೆ ಅ. 8ರ ರಾತ್ರಿ 10:00 ಗಂಟೆಗೆ ಉಳ್ಳಾಲ ತಾಲೂಕು ಕುಂಪಲದ ಡಿಮಾರ್ಟ್ ಬಳಿ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೂವರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ಬಂಧಿತ ಆರೋಪಿಗಳಿಂದ 1,58,34,000 ರೂ. ಮೌಲ್ಯದ 1 ಕೆಜಿ 796.96 ಗ್ರಾಂ ಎಂಡಿಎಂಎ ಹಾಗೂ 3 ಮೊಬೈಲ್ ಫೋನ್, ಮಾದಕ ವಸ್ತು ಸಾಗಾಟಕ್ಕೆ ಬಳಸಿದ ಮಾರುತಿ ಸುಜುಕು ಸ್ವೀಪ್ಟ್ ಕಾರು ಮತ್ತು ಆಟೋ ರಿಕ್ಷಾ, ಕೋರಿಯರ್ ರಟ್ಟಿನ ಬಾಕ್ಸ್, ವಾಟರ್ ಪ್ಯೂರಿಪಾಯರ್ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 1,63,84,000 ರೂ. ಆಗಿರುತ್ತದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಆರೋಪಿ ಅಬ್ದುಲ್ ಹಾಪೀಲ್ ವಿರುದ್ಧ ಈ ಹಿಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮಾದಕವಸ್ತು ಸೇವನೆ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಆರೋಪಿ ಜಿಯಾವುಲ್ ಹಕ್ ವಿರುದ್ಧ ದುಬೈ ದೇಶದ ರಸ್-ಅಲ್- ಖೈಮಾ ಎಂಬಲ್ಲಿ ಮಾದಕವಸ್ತು ಮಾರಾಟ ಪ್ರಕರಣದಲ್ಲಿ ಭಾಗಿಯಾಗಿ 3 ವರ್ಷಗಳ ಕಾಲ ಜೈಲ್ ಶಿಕ್ಷೆ ಅನುಭವಿಸಿ ಬಳಿಕ ಭಾರತಕ್ಕೆ ಬಂದಿರುತ್ತಾನೆ. ಇನ್ನು ಆರೋಪಿ ಅಲ್ತಾಫ್ ವಿರುದ್ಧ ಈ ಹಿಂದೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಮಾದಕವಸ್ತು ಸೇವನೆ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.
ಆರೋಪಿಗಳು ಪಂಜಾಬ್ ರಾಜ್ಯದ ಅಮೃತಸರದಿಂದ ಎಂಡಿಎಂಎ ಮಾದಕವಸ್ತುವನ್ನು ಖರೀದಿ ಮಾಡುತ್ತಿದ್ದರು. ಬಳಿಕ ಅದನ್ನು ವಾಟರ್ ಪ್ಯೂರಿಫೈಯರ್ ನ ನೀರು ಸಂಗ್ರಹವಾಗುವ ಸ್ಥಳದಲ್ಲಿ ಎಂಡಿಎಂಎ ಅನ್ನು ಭದ್ರವಾಗಿ ಒಳಗೆ ಇರಿಸುತ್ತಿದ್ದರು. ನಂತರ ಕೋರಿಯರ್ ಮೂಲಕ ಈ ಮಾದಕ ವಸ್ತುವನ್ನು ಮಂಗಳೂರಿಗೆ ಕಳುಹಿಸಿ, ಕೇರಳ ರಾಜ್ಯ ಹಾಗೂ ಮಂಗಳೂರು ನಗರದ ವಿವಿಧ ಪ್ರದೇಶಗಳಿಗೆ ಪೂರೈಕೆ ಮಾಡಿ ಮಾರಾಟ ಮಾಡಲು ಸಂಚು ರೂಪಿಸಿದ್ದರು. ಪ್ರಾರಂಭದಲ್ಲಿಯೇ ಜಾಲವನ್ನು ಪತ್ತೆಹಚ್ಚುವಲ್ಲಿ ಮತ್ತು ತಡೆಗಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿರುತ್ತಾರೆ.



