ಉಡುಪಿ, ಅಕ್ಟೋಬರ್ 10: ನಗರದ ಸಮೀಪ ಜನಗಣತಿ (SIR) ಮಾಹಿತಿ ಕೇಳುವ ನೆಪದಲ್ಲಿ ಒಂಟಿ ಮಹಿಳೆಯ ಮನೆಗೆ ನುಗ್ಗಿ ಚಿನ್ನದ ಸರ ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.
ಅಕ್ಟೋಬರ್ 7ರಂದು ಸಂಜೆ 3:47ಕ್ಕೆ ನಿಟ್ಟೂರು ಪುತ್ತೂರು ಗ್ರಾಮದ ಲಕ್ಷ್ಮೀನಾರಾಯಣ ಕೃಪಾ ನಿವಾಸದಲ್ಲಿ ಒಂಟಿಯಾಗಿ ವಾಸವಿದ್ದ ಶಾಂತ ಕಾರಂತ್ (74) ಅವರ ಮನೆಗೆ ಇಬ್ಬರು ಅಪರಿಚಿತರು ಜನಗಣತಿ ಬಗ್ಗೆ ಮಾಹಿತಿ ಕೇಳಿಕೊಂಡು ಬಂದಿದ್ದಾರೆ. ಮಾತನಾಡುತ್ತಿದ್ದಾಗ ಮನೆಯ ಒಳಗೆ ನುಗ್ಗಿ ಮಹಿಳೆಯನ್ನು ದೂಡಿ ಕೆಳಗೆ ಬೀಳಿಸಿ, ಅವರ ಕೊರಳಲ್ಲಿದ್ದ ಸುಮಾರು 30 ಗ್ರಾಂ ತೂಕದ ಗಾರ್ನೆಟ್ ಮಣಿ ಇರುವ ಚಿನ್ನದ ಸರವನ್ನು ಬಲವಂತವಾಗಿ ಕಿತ್ತುಕೊಂಡು ಪರಾರಿಯಾಗಿದ್ದರು. ಸರದ ಮೌಲ್ಯ 4 ಲಕ್ಷ ರೂ. ಎಂದು ಅಂದಾಜಿಸಲಾಗಿತ್ತು.
ಪುತ್ರ ಶ್ರೀನಿವಾಸ ಕಾರಂತ್ (49) ನೀಡಿದ ದೂರಿನ ಮೇರೆಗೆ ಉಡುಪಿ ನಗರ ಠಾಣೆಯಲ್ಲಿ ಅ.ಕ್ರ. 136/2026, ಕಲಂ 309(4), 3(5) BNS ರಂತೆ ಪ್ರಕರಣ ದಾಖಲಾಗಿತ್ತು.
ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ IPS ನಿರ್ದೇಶನದಂತೆ ಹೆಚ್ಚುವರಿ ಎಸ್ಪಿ ಸುಧಾಕರ್ ನಾಯ್ಕ ಮತ್ತು ಡಿವೈಎಸ್ಪಿ ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ, ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ತಂಡ ರಚನೆಯಾಗಿತ್ತು.
ಖಚಿತ ಮಾಹಿತಿ ಮೇರೆಗೆ ಅಕ್ಟೋಬರ್ 10ರಂದು ಮಣಿಪಾಲ ಮಣ್ಣಪಳ್ಳ ಬಳಿ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ.
ಬಂಧಿತರು ವಾದಿರಾಜ್ ಗಾಣಿಗ (44) ನಿಟ್ಟೂರು, ಪುತ್ತೂರು ಗ್ರಾಮ ಉಡುಪಿ, ಸಚಿನ್ (30), ಬೀಡುಬದಿ, ಪಡು ಗ್ರಾಮ, ಕಾಪು ಎಂದು ಗುರುತಿಸಲಾಗಿದೆ.
ವಿಚಾರಣೆ ವೇಳೆ ಆರೋಪಿಗಳು ತಪ್ಪು ಒಪ್ಪಿಕೊಂಡಿದ್ದು, ಸುಲಿಗೆ ಮಾಡಿದ ಸರವನ್ನು ಮಣಿಪಾಲದ ಇಂಡಸ್ಟ್ರಿಯಲ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಅಡವಿಟ್ಟಿರುವುದಾಗಿ ತಿಳಿಸಿದ್ದಾರೆ.
ವಶಪಡಿಸಿಕೊಂಡ ಸೊತ್ತುಗಳು 34 ಗ್ರಾಂ ತೂಕದ ಚಿನ್ನದ ಸರ – 4,50,000 ರೂ., ಕೃತ್ಯಕ್ಕೆ ಬಳಸಿದ KA20HG4761 Ola ಎಲೆಕ್ಟ್ರಿಕ್ ಸ್ಕೂಟರ್ – 90,000 ರೂ. , 2 ಮೊಬೈಲ್ ಫೋನ್ – 13,000 ರೂ., ಒಟ್ಟು 5,53,000 ರೂ. ಮೌಲ್ಯದು ಎಂದು ತಿಳಿದು ಬಂದಿದೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕಾರಣ: ಮೊದಲ ಆರೋಪಿ ದೂರುದಾರರ ನೆರೆಮನೆಯವನಾಗಿದ್ದು, ಸಾಕಷ್ಟು ಸಾಲ ಮಾಡಿಕೊಂಡಿದ್ದ. ಎರಡನೇ ಆರೋಪಿಯೂ ಸಾಲದಲ್ಲಿದ್ದ. ಸಾಲ ತೀರಿಸಲು ಮತ್ತು ಐಷಾರಾಮಿ ಜೀವನಕ್ಕಾಗಿ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪಿಎಸ್ಐಗಳಾದ ಭರತೇಶ ಕಂಕಣವಾಡಿ, ರತ್ನಾಕರ್ ಕೆ., ಸಿಬ್ಬಂದಿಗಳಾದ ಪ್ರಸನ್ನ ಸಿ., ಜೀವನ್ ಕುಮಾರ್, ಅಬ್ದುಲ್ ಬಷೀರ್, ಆನಂದ್ ಎಸ್., ಮಣಿಪಾಲ ಠಾಣೆಯ ಮಲ್ಲಯ್ಯ ಹಿರೇಮಠ್, ಹೇಮಂತ್ ಹಾಗೂ ತನಿಖಾ ಸಹಾಯಕರಾದ ನೇತ್ರಾವತಿ, ಸುರೇಂದ್ರ ಡಿ. ಸಹಕರಿಸಿದ್ದಾರೆ.





