ಬೆಳ್ತಂಗಡಿ: ದಕ್ಷಿಣ ಕನ್ನಡ ಬೆಳ್ತಂಗಡಿ ತಾಲೂಕಿನ ರೇಖ್ಯ ಗ್ರಾಮದ ನೆಲ್ಯಡ್ಕ ಸೇಮಿಪದ ಮುಚ್ಚಿನಡಕ ಎಂಬಲ್ಲಿ ಕಾಡಿನ ದಾರಿಗೆ ಹೊಂದಿಕೊಂಡಿರುವ ಸ್ಥಳದಲ್ಲಿ ಸುಮಾರು 55 ವರ್ಷದ ಬಾಲಕೃಷ್ಣ ಗೌಡ ಎಂಬ ಸ್ಥಳೀಯ ವ್ಯಕ್ತಿಯ ಶವ ಪತ್ತೆಯಾಗಿದೆ.
ಅವರು ಆನೆ ದಾಳಿಯಿಂದ ಮೃತಪಟ್ಟಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಮೃತ ಬಾಲಕೃಷ್ಣ ಗೌಡ ಎಂದಿನಂತೆ ಶನಿವಾರ ಬೆಳಗ್ಗೆಯೇ ಕೆಲಸಕ್ಕೆ ಎಂದು ಹೋದವರು ಸಂಜೆಯಾದರೂ ಮನೆಗೆ ಬಾರದೇ ಇರುವುದರಿಂದ ಮನೆಯವರು ಹಾಗೂ ಅಕ್ಕಪಕ್ಕದವರು ಅವರನ್ನು ಹುಡುಕಲು ಹೋದಾಗ ದಾರಿಯ ಮಧ್ಯ ಅವರು ಧರಿಸುತ್ತಿದ್ದ ರೈನ್ ಕೋಟ್ ಅನಾಥವಾಗಿ ಬಿದ್ದಿದ್ದು ಕಂಡುಬರುತ್ತದೆ. ಹಾಗೆಯೇ, ಅದೇ ರೈನ್ ಕೋಟ್ ಅಕ್ಕಪಕ್ಕದಲ್ಲಿ ಆನೆಯ ಹೆಜ್ಜೆ ಗುರುತು ಕಂಡುಬಂದಿರುವುದರಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಅಪಾಯದ ಮುನ್ಸೂಚನೆಯನ್ನು ಅರಿತಿದ್ದಾರೆ. ತಕ್ಷಣವೇ ಊರಿನವರು ಸುತ್ತಮುತ್ತಲು ಹುಡುಕಾಡಿದ್ದಾಗ ಅಲ್ಲಿಗೆ ಸನಿಹದ ಹಳ್ಳದಲ್ಲಿ ಬಾಲಕೃಷ್ಣ ಗೌಡನ ಮೃತ ದೇಹ ಕಂಡು ಬಂದಿದೆ. ಇದು ಆನೆಯ ದಾಳಿಯಿಂದಲೇ ಬಾಲಕೃಷ್ಣ ಗೌಡ ಮೃತಪಟ್ಟಿದ್ದಾರೆಂದು ಸ್ಥಳಿಯರು ಹೇಳುತ್ತಿದ್ದಾರೆ.
ಪೊಲೀಸರು ಹಾಗೂ ಅರಣ್ಯ ಇಲಾಖೆ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಬಗ್ಗೆ ಅರಣ್ಯ ಇಲಾಖೆ ತನಿಖೆ ನಡೆಸುತ್ತಿದೆ.





