ಕುಂದಾಪುರ: ಬೈಂದೂರು ತಾಲೂಕಿನ ನೆಂಪು ಅಂಗನವಾಡಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂಗನವಾಡಿ ಸಹಾಯಕಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಸಂಜೆ ಬೆಳಕಿಗೆ ಬಂದಿದೆ.
ಮೃತರನ್ನು ನಾಗೂರು ಗ್ರಾಮದ ಅಶ್ವೀನಿ (29) ಎಂದು ಗುರುತಿಸಲಾಗಿದೆ. ಅವರು ಕಳೆದ ಮೂರು ವರ್ಷಗಳಿಂದ ನೆಂಪು ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ದಿನಾಂಕ 08 ಜುಲೈ 2026ರಂದು ಎಂದಿನಂತೆ ಬೆಳಿಗ್ಗೆ ಕೆಲಸಕ್ಕೆ ಬಂದಿದ್ದ ಅಶ್ವೀನಿ, ಮಧ್ಯಾಹ್ನ ಸುಮಾರು 3.50ಕ್ಕೆ ಅಂಗನವಾಡಿ ಶಿಕ್ಷಕಿ ಮನೆಗೆ ತೆರಳಿದ ಬಳಿಕ ಕೇಂದ್ರದಲ್ಲೇ ಒಬ್ಬರೇ ಉಳಿದಿದ್ದರು. ಬಳಿಕ ಸಂಜೆ ಸುಮಾರು 5.30ಕ್ಕೆ ಶಿಕ್ಷಕಿ ತಮ್ಮ ಮಗುವಿನ ಆಟಿಕೆ ತೆಗೆದುಕೊಳ್ಳಲು ಅಂಗನವಾಡಿಗೆ ಮರಳಿದಾಗ ಬಾಗಿಲು ಒಳಗಿನಿಂದ ಚಿಲಕ ಹಾಕಿರುವುದು ಕಂಡುಬಂದಿದೆ. ಹಲವು ಬಾರಿ ಕರೆದರೂ ಪ್ರತಿಕ್ರಿಯೆ ಸಿಗದೇ, ಅಶ್ವೀನಿಯ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು.
ನಂತರ ಸ್ಥಳೀಯರ ಸಹಾಯದಿಂದ ಅಂಗನವಾಡಿಯ ಹಿಂಬದಿಯ ಕಿಟಕಿಯಿಂದ ನೋಡಿದಾಗ ಅಡುಗೆ ಕೋಣೆಯಲ್ಲಿ ಅಶ್ವೀನಿ ಕುತ್ತಿಗೆಗೆ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ತಕ್ಷಣ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಅವರು ಘಟನೆ ದೃಢಪಡಿಸಿದ್ದಾರೆ.
ಅಶ್ವೀನಿ ಅವರು ವೈಯಕ್ತಿಕ ಅಥವಾ ಇತರೆ ಯಾವುದೋ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 23/2026ರಂತೆ ಬಿಎನ್‌ಎಸ್‌ಎಸ್ ಕಲಂ 194 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




