Home Karavali Karnataka ನ.23ರಿಂದ ಉಡುಪಿಯಲ್ಲಿ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ…!!

ನ.23ರಿಂದ ಉಡುಪಿಯಲ್ಲಿ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ…!!

ಉಡುಪಿ: ರಾಜ್ಯದ ಪ್ರತಿಷ್ಠಿತ ನಾಟಕ ಸಂಸ್ಥೆಗಳಲ್ಲಿ ಒಂದಾದ ರಂಗಭೂಮಿ ಉಡುಪಿ ಸಂಸ್ಥೆ ಆಯೋಜಿಸುವ 46ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯ ಉದ್ಘಾಟನಾ ಸಮಾರಂಭ ನ. 23ರಂದು ಸಂಜೆ 5ಗಂಟೆಗೆ ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ ಎಂದು ರಂಗಭೂಮಿ ಸಂಸ್ಥೆಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಡಾ.ಕೆ.ವಿ.ನಾಗರಾಜ ಮೂರ್ತಿ, ಉಡುಪಿ ಸಿವಿಲ್ ಇಂಜಿನಿಯರ್ ಅಸೋಸಿಯೇಶನ್ ಅಧ್ಯಕ್ಷ ರಂಜನ್, ಉದ್ಯಮಿಗಳಾದ ಸತ್ಯಾನಂದ ನಾಯಕ್ ಹಾಗೂ ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವನಿತಾ ಮಯ್ಯ ಭಾಗವಹಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಡಾ. ಗೊಲ್ಲಹಳ್ಳಿ ಶಿವಪ್ರಸಾದ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಸಭಾಕಾರ್ಯಕ್ರಮಕ್ಕೂ ಮೊದಲು ಸಂಜೆ 4ಗಂಟೆಗೆ ರಂಗಭೂಮಿಯ ಕಲಾವಿದರಿಂದ ಗೀತಂ ಗಿರೀಶ್ ನೇತೃತ್ವದಲ್ಲಿ ‘ಸಂಗೀತ ಸೌರಭ’ ಕಾರ್ಯಕ್ರಮ ನಡೆಯಲಿದೆ.

ಈ ನಾಟಕ ಸ್ಪರ್ಧೆಯಲ್ಲಿ ಒಟ್ಟು 12 ನಾಟಕ ತಂಡಗಳು ಭಾಗವಹಿಸುತ್ತಿದ್ದು, ಬೆಂಗಳೂರಿನ 6, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಯ ತಲಾ 2, ತುಮಕೂರು ಮತ್ತು ಮೈಸೂರು ಜಿಲ್ಲೆಯ ತಲಾ 1 ತಂಡಗಳು ಭಾಗವಹಿಸಲಿವೆ. ನ. 23ರಿಂದ ಡಿ. 4ರವರೆಗೆ ಪ್ರತಿದಿನ ಸಂಜೆ 6.30ಕ್ಕೆ ನಾಟಕ ಪ್ರದರ್ಶನಗೊಳ್ಳಲಿವೆ ಎಂದು ತಿಳಿಸಿದರು. ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ 35 ಸಾವಿರ, ದ್ವಿತೀಯ 25 ಸಾವಿರ ಹಾಗೂ ತೃತೀಯ 15 ಸಾವಿರ ನಗದು ಬಹುಮಾನ ಹಾಗೂ ಶಾಶ್ವತ ಫಲಕ ನೀಡಲಾಗುವುದು. ಅಲ್ಲದೆ, ಶ್ರೇಷ್ಠ ನಿರ್ದೇಶನ, ನಟ, ನಟಿ, ಪ್ರಸಾದನ, ರಂಗಪರಿಕರ, ಸಂಗೀತ, ಬೆಳಕು, ಹಾಸ್ಯನಟ, ಬಾಲನಟ, ಶಿಸ್ತಿನ ತಂಡ ಈ ಎಲ್ಲಾ ವಿಭಾಗಗಳಿಗೆ ನಗದು ಸಹಿತ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರಂಗಭೂಮಿಯ ಉಪಾಧ್ಯಕ್ಷ ರಾಜಗೋಪಾಲ ಬಲ್ಲಾಳ್, ಪ್ರಧಾನ ಕಾರ್ಯದರ್ಶಿ ಪ್ರದೀಪ್‌ ಚಂದ್ರ ಕುತ್ಪಾಡಿ, ಜೊತೆ ಕಾರ್ಯದರ್ಶಿ ವಿವೇಕಾನಂದ ಎನ್. ಹಾಗೂ ಕೋಶಾಧಿಕಾರಿ ಯು. ಭೋಜ ಉಪಸ್ಥಿತರಿದ್ದರು.