Home Crime ಗುಂಡ್ಯ – ಕಾರು-ಟ್ಯಾಂಕರ್ ಮುಖಾಮುಖಿ ಢಿಕ್ಕಿ : ಐವರಿಗೆ ಗಾಯ…!!

ಗುಂಡ್ಯ – ಕಾರು-ಟ್ಯಾಂಕರ್ ಮುಖಾಮುಖಿ ಢಿಕ್ಕಿ : ಐವರಿಗೆ ಗಾಯ…!!

ನೆಲ್ಯಾಡಿ : ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗುಂಡ್ಯ ಸಮೀಪದ ಬರ್ಚಿನಹಳ್ಳದಲ್ಲಿ ಭಾನುವಾರ (ಜೂನ್ 28) ಮಧ್ಯಾಹ್ನ ಕಾರು ಹಾಗೂ ಟ್ಯಾಂಕರ್ ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಕಾರಿನಲ್ಲಿದ್ದ ಐವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತ ಹಾಗೂ ವಾರಾಂತ್ಯದ ಸರಣಿ ರಜೆಯ ಕಾರಣದಿಂದಾಗಿ ಹೆದ್ದಾರಿಯಲ್ಲಿ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತು ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಅಪಘಾತದಲ್ಲಿ ಗಾಯಗೊಂಡವರನ್ನು ಸಕಲೇಶಪುರ ನಿವಾಸಿಗಳಾದ ಸಂಜಯ್ (34), ಲಲಿತಾ (45), ಮೋನಪ್ಪ (56), ಪ್ರೇಮಾ (34) ಮತ್ತು ಸುರೇಶ (39) ಎಂದು ಗುರುತಿಸಲಾಗಿದೆ.

ಇವರೆಲ್ಲರನ್ನೂ ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಾಯಾಳುಗಳು ನೆಲ್ಯಾಡಿಯಿಂದ ಸಕಲೇಶಪುರ ಕಡೆಗೆ ಕಾರಿನಲ್ಲಿ ಹೋಗುತ್ತಿದ್ದಾಗ, ಗುಂಡ್ಯ ಸಮೀಪದ ಬರ್ಚಿನಹಳ್ಳ ತಲುಪುತ್ತಿದ್ದಂತೆ ಎದುರಿನಿಂದ ಅಂದರೆ ಸಕಲೇಶಪುರದಿಂದ ನೆಲ್ಯಾಡಿ ಕಡೆಗೆ ಬರುತ್ತಿದ್ದ ಟ್ಯಾಂಕರ್ ಲಾರಿ ನಡುವೆ ಹೆದ್ದಾರಿ ಮಧ್ಯೆಯೇ ಭೀಕರ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ಜಖಂಗೊಂಡಿದ್ದು, ಒಳಗಿದ್ದ ಐವರಿಗೂ ಗಾಯಗಳಾಗಿವೆ.

ಸರಣಿ ರಜೆಗಳ ಹಿನ್ನೆಲೆಯಲ್ಲಿ ಕರಾವಳಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳಕ್ಕೆ ಭಾರಿ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಆಗಮಿಸಿದ್ದರು. ಭಾನುವಾರ ಮಧ್ಯಾಹ್ನ ಈ ಭಕ್ತರೆಲ್ಲರೂ ಏಕಕಾಲಕ್ಕೆ ತಮ್ಮ ಊರುಗಳತ್ತ ಮರಳುತ್ತಿದ್ದರಿಂದ ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ವಿಪರೀತವಾಗಿತ್ತು. ಇದರ ನಡುವೆ ರಾಷ್ಟ್ರೀಯ ಹೆದ್ದಾರಿಯ ಮಧ್ಯದಲ್ಲೇ ಈ ಅಪಘಾತ ಸಂಭವಿಸಿದ್ದರಿಂದ ಮಧ್ಯಾಹ್ನದಿಂದ ಸಂಜೆ ತನಕವೂ ವಾಹನಗಳ ಸುಗಮ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತು. ಕಿಲೋಮೀಟರ್‌ಗಟ್ಟಲೆ ದೂರದವರೆಗೆ ನೂರಾರು ವಾಹನಗಳು ರಸ್ತೆಯಲ್ಲೇ ಸಾಲುಗಟ್ಟಿ ನಿಲ್ಲುವಂತಾಯಿತು. ತಕ್ಷಣ ಸ್ಥಳಕ್ಕೆ ಧಾವಿಸಿದ ನೆಲ್ಯಾಡಿ ಹೊರಠಾಣೆ ಪೊಲೀಸರು ಸತತ ಕಾರ್ಯಾಚರಣೆ ನಡೆಸಿ ವಾಹನಗಳ ಸುಗಮ ಸಂಚಾರಕ್ಕೆ ಹರಸಾಹಸ ಪಟ್ಟರು.