Home Dskshina Kannada ರಿಲಯನ್ಸ್ ಎಸೋಸಿಯೇಶನ್ ವತಿಯಿಂದ ಉಚಿತ ಪುಸ್ತಕ ವಿತರಣೆ ಹಾಗು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

ರಿಲಯನ್ಸ್ ಎಸೋಸಿಯೇಶನ್ ವತಿಯಿಂದ ಉಚಿತ ಪುಸ್ತಕ ವಿತರಣೆ ಹಾಗು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

ಹಳೆಯಂಗಡಿ: ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಬಾರಿಯ ಪಿಯುಸಿ ಹಾಗು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಿಲಯನ್ಸ್ ಎಸೋಸಿಯೇಶನ್ ಬೊಳ್ಳೂರು ಹಳೆಯಂಗಡಿ ಇದರ ವತಿಯಿಂದ ತೈತೋಟ ಚಾರಿಟೇಬಲ್ ಟ್ರಸ್ಟ್ ಬೊಳ್ಳೂರು ಇದರ ಸಹಭಾಗಿತ್ವದಲ್ಲಿ ಪ್ರೋತ್ಸಾಹಧನ ಹಾಗೂ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮವು ಇತ್ತೀಚಿಗೆ ಇಂದಿರಾನಗರದ ರಿಲಯನ್ಸ್ ಭವನದಲ್ಲಿ ನಡೆಯಿತು.

ರಿಲಯನ್ಸ್ ಅಸೋಸಿಯೇಷನ್ ಅಧ್ಯಕ್ಷ ಎಂ.ಎ ಇಕ್ಬಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಉದ್ಘಾಟಿಸಿ ಮಾತನಾಡಿದ ಬೊಳ್ಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶಶಿಕಲಾ ಅವರು..

*”ಇಲ್ಲಿನ ರಿಲಯನ್ಸ್ ಸಂಸ್ಥೆಯು ಕಳೆದ ಹಲವಾರು ವರ್ಷಗಳಿಂದ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಕೊಂಡು ಸದಾ ಒಂದಲ್ಲೊಂದು ಕಾರ್ಯಕ್ರಮಗಳನ್ನು ನಡೆಸುವ ಉತ್ತಮ ಬೆಳವಣಿಗೆಯನ್ನು ಹೊಂದಿದೆ. ಬಡ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಪ್ರತಿ ವರ್ಷವೂ ಅವರಿಗೆ ಸಹಾಯಧನದ ಜೊತೆಗೆ ಗೌರವಪೂರ್ವಕ ಸನ್ಮಾನ ನೀಡುವ ಕಾರ್ಯಕ್ರಮಗಳನ್ನು ನಡೆಸುತ್ತಾ, ರಿಲಯನ್ಸ್ ಸಂಸ್ಥೆಯು ಮಕ್ಕಳ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಪ್ರೇರಣೆ ನೀಡುತ್ತಿದೆ. ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿ ಪ್ರತಿಭಾವಂತ ಮಕ್ಕಳನ್ನು ಪ್ರೋತ್ಸಾಹಿಸುವುದರಿಂದ ಅವರು ಭವಿಷ್ಯದಲ್ಲಿ ಇನ್ನಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ’ ಎಂದರು.

ವೇದಿಕೆಯಲ್ಲಿ ತೈತೋಟ ಚಾರಿಟೇಬಲ್ ಟ್ರಸ್ಟ್ ನ ಬದ್ರುದ್ದೀನ್, ಉದ್ಯಮಿ ಶರೀಫ್ ಸೌದಿ ಅರೇಬಿಯಾ, ರಿಲಯನ್ಸ್ ಸೌದಿ ಘಟಕದ ಅಧ್ಯಕ್ಷರಾದ ಜಲೀಲ್ ನವರಂಗ್, ಮಾಜಿ ಅಧ್ಯಕ್ಷ ಕಲಂದರ್ ಕೌಶಿಕ್ ಹಾಗು ಅಯಾಜ್ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಸಂಸ್ಥೆಯಲ್ಲಿ ನೂತನವಾಗಿ ಪ್ರಾರಂಭಿಸಿದ ಟೈಕ್ವೊಂಡೋ ಮಾರ್ಸಲ್ ಆರ್ಟ್ಸ್ ತರಗತಿಯ ಉದ್ಘಾಟನೆಯು ನಡೆಯಿತು. ಕರಾಟೆ ತರೆಬೇತುದಾರರಾದ ಆಸೀಫ್ ಕಿನ್ಯ ಅವರು ಕರಾಟೆಯ ಶಕ್ತಿ ಪ್ರದರ್ಶನಗಳನ್ನು ನೀಡಿದರು. ಸಂಸ್ಥೆಯ ಉಪಾಧ್ಯಕ್ಷ ಇಲ್ಯಾಸ್ ಅಲ್ ಅಕ್ಸ, ಕಾರ್ಯದರ್ಶಿ ಮುಬಾರಕ್ ಬೊಳ್ಳೂರು, ಲೆಕ್ಕ ಪರಿಶೋಧಕ ಅಕ್ಬರ್ ಬೊಳ್ಳೂರು ಅವರು ಈ ವೇಳೆ ಉಪಸ್ಥಿತರಿದ್ದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮೊಯಿದಿನ್ ಬಿ.ಎಂ ಕಾರ್ಯಕ್ರಮ ನಿರೂಪಿಸಿ, ಸಲಹೆಗಾರರಾದ ಆರಿಶ್ ನವರಂಗ್ ವಂದಿಸಿದರು.