ಉಡುಪಿ: ಸೌತ್ ಇಂಡಿಯನ್ ಬ್ಯಾಂಕ್ ಸಿಬ್ಬಂದಿ ಎಂದು ನಂಬಿಸಿ ವಾಟ್ಸಾಪ್ ಮೂಲಕ APK ಫೈಲ್ ಕಳುಹಿಸಿ 17.50 ಲಕ್ಷ ರೂಪಾಯಿ ವಂಚಿಸಿದ ಘಟನೆ ಕುಕ್ಕಿಕಟ್ಟೆಯಲ್ಲಿ ನಡೆದಿದೆ.
ಕುಕ್ಕಿಕಟ್ಟೆ ನಿವಾಸಿ ಅಜಯ್ ಜಗದೀಶ್ ಅವರಿಗೆ ಆಗಸ್ಟ್ 27 ರಂದು ಸಂಜೆ 4:15ಕ್ಕೆ 9315675768 ನಂಬರ್‌ನಿಂದ ವಾಟ್ಸಾಪ್ ಸಂದೇಶ ಬಂದಿದೆ. ತನ್ನನ್ನು ಶಿವಕುಮಾರ್, ಸೌತ್ ಇಂಡಿಯಾ ಬ್ಯಾಂಕ್ ಪ್ರತಿನಿಧಿ ಎಂದು ಪರಿಚಯಿಸಿಕೊಂಡ ವ್ಯಕ್ತಿ, ಬ್ಯಾಂಕ್ KYC ಅಪ್ಡೇಟ್ ಮಾಡಬೇಕೆಂದು APK ಫೈಲ್ ಜೊತೆಗೆ ಲಿಂಕ್ ಕಳುಹಿಸಿದ್ದಾನೆ.
ಇದನ್ನು ನಂಬಿದ ಅಜಯ್ ಅವರು ಲಿಂಕ್‌ನಲ್ಲಿ ತಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಭರ್ತಿ ಮಾಡಿದ್ದಾರೆ. ನಂತರ ವಂಚಕ ಡೈಲಿ ಲಿಮಿಟ್ ಹೆಚ್ಚಿಸಲು ಎಂದು ಹೇಳಿ ಅವರ ICICI ಬ್ಯಾಂಕ್ ಖಾತೆ ನಂಬರ್ ಪಡೆದುಕೊಂಡಿದ್ದಾನೆ.
ನಂತರ ವಂಚಕ, ಸೆಪ್ಟೆಂಬರ್ 2 ರಂದು ಹಂತ ಹಂತವಾಗಿ ವಿವಿಧ ಬೇನಾಮಿ ಖಾತೆಗಳಿಗೆ ಅಜಯ್ ಅವರ ICICI ಖಾತೆಯಿಂದ ಒಟ್ಟು ರೂ. 17,50,000/- ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾನೆ.
ಈ ಬಗ್ಗೆ ಸೆನ್ (CEN) ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 36/2026, ಕಲಂ 66(D) IT ಕಾಯ್ದೆ ಹಾಗೂ ಕಲಂ 319(2), 318(4) BNS ರಂತೆ ಪ್ರಕರಣ ದಾಖಲಾಗಿದೆ. ಸೆನ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



