Home Crime ಕರಾವಳಿ ಅಭಿವೃದ್ಧಿಗೆ ಗೋವಾ ಪ್ರವಾಸೋದ್ಯಮ ಮಾದರಿ ಬೇಡ : ಯತ್ನಾಳ್…!!

ಕರಾವಳಿ ಅಭಿವೃದ್ಧಿಗೆ ಗೋವಾ ಪ್ರವಾಸೋದ್ಯಮ ಮಾದರಿ ಬೇಡ : ಯತ್ನಾಳ್…!!

ಉಡುಪಿ : ಕರಾವಳಿ ಅಭಿವೃದ್ಧಿಗೆ ಗೋವಾ ಮಾದರಿಯ ಪ್ರವಾಸೋದ್ಯಮವನ್ನು ಅನುಸರಿಸುವ ಅಗತ್ಯವಿಲ್ಲ. ಕರಾವಳಿಯ ಸಂಸ್ಕೃತಿ ಹಾಗೂ ಪರಂಪರೆಗೆ ಪೂರಕವಾದ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕು ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರಾವಳಿಯಿಂದಲೇ ಗೋವಾಕ್ಕೆ ತೆರಳಿ ಲಕ್ಷಾಂತರ ರೂಪಾಯಿ ಆದಾಯ ಮಾಡಿಕೊಡುತ್ತಿರುವುದನ್ನು ಕಾಣುತ್ತಿದ್ದೇವೆ. ಆದರೆ ಗೋವಾದ ಪ್ರವಾಸೋದ್ಯಮ ಮಾದರಿ ನಮ್ಮ ಸಂಸ್ಕೃತಿಗೆ ಹೊಂದಿಕೆಯಾಗುವುದಿಲ್ಲ. ಅದನ್ನು ತಡೆಯುವ ನಿಟ್ಟಿನಲ್ಲಿ ಚಿಂತನೆ ಅಗತ್ಯ ಎಂದರು.

ಕರಾವಳಿಯಲ್ಲಿ ದೇವಾಲಯ ಪ್ರವಾಸೋದ್ಯಮ ಹಾಗೂ ಸುಂದರ ಕಡಲತೀರಗಳನ್ನು ಆಧರಿಸಿದ ಪ್ರವಾಸೋದ್ಯಮಕ್ಕೆ ಅಪಾರ ಅವಕಾಶಗಳಿವೆ. ವಿಯೆಟ್ನಾಂನಂತಹ ಸಣ್ಣ ರಾಷ್ಟ್ರಗಳು ಪ್ರವಾಸೋದ್ಯಮದ ಮೂಲಕ ಅಭಿವೃದ್ಧಿ ಸಾಧಿಸುತ್ತಿವೆ. ಅದೇ ರೀತಿ ಕರಾವಳಿಯಲ್ಲೂ ಸ್ಥಳೀಯ ಸಂಸ್ಕೃತಿಗೆ ಪೂರಕವಾದ ಪ್ರವಾಸೋದ್ಯಮವನ್ನು ಬೆಳೆಸಬೇಕು ಎಂದು ಹೇಳಿದರು.

ಉಡುಪಿಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯ ಕುರಿತು ಪ್ರತಿಕ್ರಿಯಿಸಿದ ಅವರು, ಸರ್ಕಾರ ಸಚಿವ ಸಂಪುಟ ಸಭೆಯನ್ನು ಎಲ್ಲಿ ನಡೆಸಿದರೂ ಅದರಿಂದ ಮಾತ್ರ ಅಭಿವೃದ್ಧಿ ಸಾಧ್ಯವಿಲ್ಲ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಿ ನೂರಾರು, ಸಾವಿರಾರು ಕೋಟಿ ರೂ.ಗಳ ಆಶ್ವಾಸನೆ ನೀಡಲಾಗಿತ್ತು. ಆದರೆ ನಿರೀಕ್ಷಿತ ಅಭಿವೃದ್ಧಿ ಆಗಿಲ್ಲ ಎಂದು ಆರೋಪಿಸಿದರು.

ಕರಾವಳಿಯಲ್ಲಿ ಬದಲಾವಣೆ ತರುತ್ತಿದ್ದೇವೆ ಎಂಬುದನ್ನು ತೋರಿಸಿಕೊಳ್ಳಲು ಹಾಗೂ ಮತಬ್ಯಾಂಕ್ ಸೆಳೆಯಲು ಸಚಿವ ಸಂಪುಟ ಸಭೆ ನಡೆಸಲಾಗುತ್ತಿದೆ ಎಂಬುದು ತಮ್ಮ ಅಭಿಪ್ರಾಯ ಎಂದು ಯತ್ನಾಳ್ ಹೇಳಿದರು. ಅಭಿವೃದ್ಧಿಗೆ ಪೂರಕವಾದ ನಿರ್ಣಯಗಳನ್ನು ಕೈಗೊಂಡಾಗ ಮಾತ್ರ ಇಂತಹ ಸಭೆಗಳಿಗೆ ಅರ್ಥವಿರುತ್ತದೆ ಎಂದರು.

ಗಣೇಶೋತ್ಸವಕ್ಕೆ ಸರ್ಕಾರ ವಿಧಿಸುತ್ತಿರುವ ನಿಯಮಗಳ ಕುರಿತು ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳು ಒಂದೊಂದು ರೀತಿಯ ಆದೇಶ ನೀಡುತ್ತಿದ್ದಾರೆ. ಕೆಲವು ಕಡೆ ಡಿಜೆ ಹಾಗೂ ಮೆರವಣಿಗೆಗಳಿಗೆ ನಿರ್ಬಂಧ ವಿಧಿಸಲಾಗುತ್ತಿದೆ. ಆದರೆ ಇತರ ಧಾರ್ಮಿಕ ಕಾರ್ಯಕ್ರಮಗಳಿಗೆ ಬೇರೆ ರೀತಿಯ ಮಾನದಂಡ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು. ಹಿಂದೂ ಸಮಾಜ ತನ್ನ ಹಕ್ಕುಗಳಿಗಾಗಿ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಹೇಳಿದರು.

‘ವಂದೇ ಮಾತರಂ’ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಯತ್ನಾಳ್, ದೇಶಭಕ್ತಿ ಮತ್ತು ರಾಷ್ಟ್ರಾಭಿಮಾನಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ರಾಜಕೀಯ ಮಾಡಬಾರದು ಎಂದರು. ವಂದೇ ಮಾತರಂನಲ್ಲಿ ತಾಯಿಯನ್ನು ಗೌರವಿಸುವ ಭಾವನೆಯಿದೆ. ಅದರಲ್ಲಿ ಯಾವುದೇ ಕೋಮು ದ್ವೇಷದ ವಿಚಾರವಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಬರ ಪರಿಸ್ಥಿತಿ, ರೈತರ ಭೂಮಿ ಒತ್ತುವರಿ ಹಾಗೂ ನೀರಾವರಿ ಯೋಜನೆಗಳ ಕುರಿತು ವಿಧಾನಸಭೆಯಲ್ಲಿ ಸಮಗ್ರ ಚರ್ಚೆ ನಡೆಯಬೇಕಿದೆ. ಕಳೆದ ಅಧಿವೇಶನದಲ್ಲಿ ಸಮರ್ಪಕವಾಗಿ ಚರ್ಚೆಗೆ ಅವಕಾಶ ಸಿಗಲಿಲ್ಲ. ಕನಿಷ್ಠ ಎರಡು ವಾರಗಳ ಕಾಲ ಅಧಿವೇಶನ ನಡೆಸಿ ರಾಜ್ಯದ ಪ್ರಮುಖ ಸಮಸ್ಯೆಗಳ ಕುರಿತು ಚರ್ಚಿಸಬೇಕು ಎಂದು ಆಗ್ರಹಿಸಿದರು.

ಕಸ್ತೂರಿರಂಗನ್ ವರದಿ ಸೇರಿದಂತೆ ಕರಾವಳಿಯ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡ ಬಳಿಕ ಅಭಿವೃದ್ಧಿ ವಿಚಾರಗಳ ಬಗ್ಗೆ ಸಮಗ್ರ ಚರ್ಚೆ ನಡೆಯಬೇಕು ಎಂದು ಯತ್ನಾಳ್ ಹೇಳಿದರು.