Home Crime ಕೋಟ : ಸರಕಾರಿ ಕೆಲಸದ ಆಮಿಷವೊಡ್ಡಿ ಯುವತಿಗೆ 10.83 ಲಕ್ಷ ರೂ. ವಂಚನೆ…!!

ಕೋಟ : ಸರಕಾರಿ ಕೆಲಸದ ಆಮಿಷವೊಡ್ಡಿ ಯುವತಿಗೆ 10.83 ಲಕ್ಷ ರೂ. ವಂಚನೆ…!!

ಕೋಟ: ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಯೊಬ್ಬರಿಂದ ಬರೋಬ್ಬರಿ 10.83 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿದ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬ್ರಹ್ಮಾವರ ತಾಲೂಕಿನ ಐರೋಡಿ ಗ್ರಾಮದ ನಿವಾಸಿ ಕು. ಎಸ್‌ ವರ್ಷಾ ಎಂಬುವವರೇ ವಂಚನೆಗೊಳಗಾದ ಯುವತಿ.

ಈ ಸಂಬಂಧ ಅಭಿಷೇಕ್‌ ಎಂಬಾತನ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಆರೋಪಿ ಅಭಿಷೇಕ್ ಸರಕಾರಿ ಕೆಲಸ ಕೊಡಿಸುವುದಾಗಿ ವರ್ಷಾ ಅವರಿಗೆ ನಂಬಿಸಿದ್ದನು. ಇದನ್ನು ಸತ್ಯವೆಂದು ನಂಬಿದ ವರ್ಷಾ ಅವರು ದಿನಾಂಕ 31.10.2025 ರಿಂದ 28.05.2026 ರ ಅವಧಿಯಲ್ಲಿ ತಮ್ಮ ಬ್ಯಾಂಕ್ ಖಾತೆ, ಫೋನ್ ಪೇ (PhonePe) ಹಾಗೂ ಗೂಗಲ್ ಪೇ (Google Pay) ಮುಖಾಂತರ ಹಂತ-ಹಂತವಾಗಿ ಒಟ್ಟು 10,83,000/- ರೂ. ಹಣವನ್ನು ಆರೋಪಿಯ ಖಾತೆಗೆ ವರ್ಗಾಯಿಸಿದ್ದರು.

ಹಣ ಪಡೆದ ಬಳಿಕ ಆರೋಪಿ ಅಭಿಷೇಕ್ ವರ್ಷಾ ಅವರಿಗೆ ಯಾವುದೇ ಸರಕಾರಿ ಕೆಲಸವನ್ನು ಕೊಡಿಸದೆ ಕಾಲಹರಣ ಮಾಡಿದ್ದಾನೆ. ಇದರಿಂದ ಅನುಮಾನಗೊಂಡ ಯುವತಿ, ತನಗೆ ಕೆಲಸ ಕೊಡಿಸುವಂತೆ ಇಲ್ಲವೇ ತಾನು ನೀಡಿದ ಹಣವನ್ನು ವಾಪಸ್ ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ ಆರೋಪಿಯು ಹಣವನ್ನು ಹಿಂತಿರುಗಿಸದೆ ವಂಚಿಸಿದ್ದಾನೆ.

ಸಂತ್ರಸ್ತೆ ವರ್ಷಾ ಅವರು ತನ್ನ ಹಣವನ್ನು ಕೇಳಲು ಹೋದಾಗ ಆರೋಪಿ ಅಭಿಷೇಕ್ ಅವಾಚ್ಯ ಶಬ್ದಗಳಿಂದ ಬೈದು, ತನಗೆ ತೊಂದರೆ ನೀಡಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಸ್ತುತ ಸಂತ್ರಸ್ತೆಯ ದೂರಿನ ಮೇರೆಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.