ಶಿರ್ವಾ: ತನ್ನ ೨೦ನೇ ವಯಸ್ಸಿಗೆ ಉದ್ಯೋಗ ನಿಮಿತ್ತ ಬೊಂಬಾಯಿ, ವಿದೇಶಕ್ಕೆ ತೆರಳಿ ಅಲ್ಲಿ ೩೩ ವರ್ಷ ಸೇವೆ ಸಲ್ಲಿಸಿ ತಾಯಿಯ ಆರೈಕೆಗಾಗಿ ಹುಟ್ಟೂರು ಬೆಳ್ಳೆ ಗ್ರಾಮದ ಪಾಂಬೂರು ದಿಂದೊಟ್ಟಿಗೆ ಬಂದ ಸ್ಯಾಮ್ಸನ್ ನೊರೋನ್ಹಾ ಪಾಂಬೂರು ಅವರು ಸ್ವಾವಲಂಬಿ, ವೈಜ್ಞಾನಿಕ ಮನೋಭಾವದಿಂದ ತಾನು ಹುಟ್ಟಿದ ನೆಲದಲ್ಲಿ ಕೃಷಿ ಕ್ರಾಂತಿಯನ್ನೇ ಮಾಡಿದ್ದಾರೆ.
ತನ್ನ ತಂದೆಯವರು ಅನಾರೋಗ್ಯ ಕಾರಣ ನಿಲ್ಲಿಸಿದ್ದ ಕೃಷಿಯನ್ನು ಅವರ ಮರಣದ ಬಳಿಕ ವೃದ್ಧೆ ತಾಯಿಯನ್ನು ನೋಡಿಕೊಳ್ಳುವ ಜತೆಗೆ ತನ್ನಿಷ್ಟದ ಕಾಯಕವನ್ನಾಗಿ ಮಾಡಿದ ಸ್ಯಾಮ್ಸನ್ ೧೫ ವರ್ಷಗಳಿಂದ ಹಡಿಲು ಬಿದ್ದಿದ್ದ ಗದ್ದೆಗಳನ್ನು ಪುನರುಜ್ಜೀವನ ಮಾಡಿದ್ದಾರೆ. ಉಳಿದಂತೆ ತೆಂಗು, ಅಡಿಕೆ, ಬಾಳೆ, ಡ್ರ್ಯಾಗನ್ ಫ್ರೂಟ್, ಅನಾನಸು, ಕಾಳುಮೆಣಸು, ತರಕಾರಿ ಬೆಳೆ ಬೆಳೆದಿದ್ದಾರೆ. ಸರಕಾರದ ನೆರವಿಗೆ ಕಾಯದೆ ಸ್ವಾವಲಂಬಿ ಯಶಸ್ವಿ ಕೃಷಿಕರಾಗಿದ್ದಾರೆ. ಕನ್ನಡ, ಕೊಂಕಣಿ, ತುಳು ಸಾಹಿತ್ಯದ ಅಭಿಮಾನಿ ಸ್ಯಾಮ್ಸನ್, ಕಾಪು ತಾಲ್ಲೂಕು ಸಮ್ಮೇಳನದ ಖಾಯಂ ಪ್ರತಿನಿಧಿ ಹಾಗೂ ಚುಟುಕು ಕವಿಯೂ ಹೌದು.
ವ್ಯಾಪಾರ ಮಾಡು ಎಂದಿದ್ದರು!
ಕೃಷಿಯಲ್ಲಿ ಲಾಭವಿಲ್ಲ. ನೀನು ಊರಿನಲ್ಲಿ ವ್ಯಾಪಾರ ಮಾಡು ಎಂದು ಹಲವರು ಹೇಳಿದ್ದರು. ವೈಜ್ಞಾನಿಕ ಕೃಷಿಯಿಂದ ಲಾಭ ಇದೆ. ಆದರೆ ಎಲ್ಲದಕ್ಕಿಂತ ಮುಖ್ಯವಾಗಿ ಪರಿಸರದ ಪ್ರೀತಿ ಇದೆ. ಬದುಕಿನಲ್ಲಿ ತೃಪ್ತಿ ಇದೆ. ನಾನು ಬೆಳಗ್ಗಿನ ಕಾಫಿ ಕುಡಿಯುವುದೇ ತೋಟದಲ್ಲಿ, ನನ್ನ ಗಿಡ, ಮರಗಳ ಒಲುಮೆಯಲ್ಲಿ ಎಂಬುದು ಸ್ಯಾಮ್ಸನ್ ಮನದಾಳದ ಮಾತು.
ಸದ್ಯ ನಾನು ಮಾಡಿದ ಕೃಷಿಯಿಂದ ಲಾಭ ಬರಲು ಇನ್ನು ೩ ವರ್ಷ ಬೇಕು. ಯಾಂತ್ರೀಕೃತ ಕೃಷಿಯಿಂದ ಅನುಕೂಲ ಇದೆ. ನೀರಾವರಿಗೆ ಪೈಪ್, ಸ್ಪ್ರಿಂಕ್ಲರ್, ತೋಡು ಹೀಗೆ ವೈಜ್ಞಾನಿಕವಾಗಿ ವ್ಯವಸ್ಥೆ ಮಾಡಿದರೆ ಕೂಲಿಗೆ ಜನರ ಅನಿವಾರ್ಯತೆ ಕಡಿಮೆಯಾಗುತ್ತದೆ. ಹುಲ್ಲು ಜಮೀನಿನ ತೇವಾಂಶ ಕಾಪಿಡಲು ಅತ್ಯಗತ್ಯ. ಜನವರಿ ಬಳಿಕ ಹುಲ್ಲು ಕಟಾವು ಮಾಡಬೇಕು. ಇದರಿಂದ ಮಣ್ಣಿನ ಫಲವತ್ತತೆ ನಷ್ಟವಾಗುವುದಿಲ್ಲ : ಸ್ಯಾಮ್ಸನ್ ನೊರೋನ್ಹಾ…
ಹವ್ಯಾಸಿ ಮಳೆ ಮಾಪನ ಕೇಂದ್ರ: ಆಸುಪಾಸಿನಲ್ಲೇ ಏಕೈಕ ಎಂದೇ ಹೇಳಬಹುದಾದ ಮಳೆ ಮಾಪನ ಕೇಂದ್ರವನ್ನೂ ಸ್ಯಾಮ್ಸನ್ ಹೊಂದಿದ್ದಾರೆ. ಬೆಳ್ಳೆ ಗ್ರಾಮದ ದಿಂದೊಟ್ಟಿನಲ್ಲಿ ಮಳೆಯಾದ ವಿವರವನ್ನು ಹಾಗೂ ವರ್ಷದ ತುಲಾನತ್ಮಕ ಅಂಕಿಅಂಶಗಳನ್ನು ಅವರು ಹಂಚಿಕೊಳ್ಳುತ್ತಾರೆ. ಹವಾಮಾನ ವರದಿಗಳ ಮಾಹಿತಿಯನ್ನೂ ನೀಡುತ್ತಾರೆ.












