Home Crime ಉಡುಪಿ ಸರ್ಕಾರಿ ಬಸ್ ನಿಲ್ದಾಣದಲ್ಲಿ ಅಪ್ರಾಪ್ತೆಯ ರಂಪಾಟ : ಚಾಕುವಿನಿಂದ ದಾಳಿಗೆ ಯತ್ನಮ…!!

ಉಡುಪಿ ಸರ್ಕಾರಿ ಬಸ್ ನಿಲ್ದಾಣದಲ್ಲಿ ಅಪ್ರಾಪ್ತೆಯ ರಂಪಾಟ : ಚಾಕುವಿನಿಂದ ದಾಳಿಗೆ ಯತ್ನಮ…!!

ಉಡುಪಿ : ನಗರದ ಬನ್ನಂಜೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ಸೋಮವಾರ ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದ ಅಪ್ರಾಪ್ತ ಯುವತಿ ಚಾಕು ಹಿಡಿದು ರಂಪಾಟ ನಡೆಸಿದ ಘಟನೆ ಸಂಭವಿಸಿದೆ.

ಯುವತಿಯ ರಕ್ಷಣೆಗೆ ತೆರಳಿದ್ದ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರ ಮೇಲೆಯೇ ಯುವತಿ ಚಾಕು ಬೀಸಿ ದಾಳಿ ನಡೆಸಿದ್ದು, ಅವರು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಉತ್ತರ ಕನ್ನಡ ಮೂಲದ ಯುವತಿ ಯಾವುದೋ ಕಾರಣದಿಂದ ಮಾನಸಿಕ ಅಸ್ಥಿರತೆಗೆ ಒಳಗಾಗಿದ್ದು, ಸೋಮವಾರ ಬೆಳಗ್ಗೆ ಹೆತ್ತವರ ಗಮನ ತಪ್ಪಿಸಿ ಉಡುಪಿಗೆ ತೆರಳುತ್ತಿದ್ದ ಸರ್ಕಾರಿ ಬಸ್ ಏರಿದ್ದಳು. ವಿಷಯ ತಿಳಿದ ತಾಯಿ-ತಂದೆ ಕಾರಿನಲ್ಲಿ ಬಸ್ಸನ್ನು ಹಿಂಬಾಲಿಸಿ ಉಡುಪಿಗೆ ಬಂದಿದ್ದಾರೆ.

ಪ್ರಕರಣದ ಮಾಹಿತಿ ಪಡೆದ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ತಕ್ಷಣ ಬನ್ನಂಜೆ ಬಸ್ ನಿಲ್ದಾಣಕ್ಕೆ ಧಾವಿಸಿ, ಪೊಲೀಸರು ಹಾಗೂ ಮಕ್ಕಳ ರಕ್ಷಣಾ ಇಲಾಖೆಯ ಸಿಬ್ಬಂದಿಯ ಸಹಾಯದೊಂದಿಗೆ ಯುವತಿಯನ್ನು ಸುರಕ್ಷಿತವಾಗಿ ವಶಕ್ಕೆ ಪಡೆಯಲು ಪ್ರಯತ್ನಿಸಿದರು. ಇದೇ ವೇಳೆ ಮನೋನಿಯಂತ್ರಣ ಕಳೆದುಕೊಂಡ ಯುವತಿ ತನ್ನ ಬ್ಯಾಗಿನಿಂದ ಚಾಕು ತೆಗೆದು ವಿಶು ಶೆಟ್ಟಿ ಅವರ ಮೇಲೆ ದಾಳಿ ನಡೆಸಿದ್ದಾಳೆ.ವಿಶು ಶೆಟ್ಟಿ ಅವರು ತಕ್ಷಣ ತಪ್ಪಿಸಿಕೊಂಡು, ಬಳಿಕ ಯುವತಿಯ ಕೈಯಲ್ಲಿದ್ದ ಚಾಕುವನ್ನು ಕಸಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಿಂದ ಬಸ್ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಯುವತಿ ಇಬ್ಬರು ಪ್ರಯಾಣಿಕರ ಮೇಲೂ ಮುಷ್ಟಿಯಿಂದ ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ಮಹಿಳಾ ಠಾಣೆಯ ಸಿಬ್ಬಂದಿ ರಶ್ಮಿ ಹಾಗೂ ಮಕ್ಕಳ ರಕ್ಷಣಾ ಇಲಾಖೆಯ ಸುನಂದಾ ಮತ್ತು ನಾಗರತ್ನ ಅವರು ಸಹಕರಿಸಿದ್ದಾರೆ.