ಯಲ್ಲಾಪುರ: ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ 2001ರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 25 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪಿ.ಎಸ್.ಐ ಸಿದ್ದು ಗುಡಿ ನೇತೃತ್ವದ ತಂಡ ಗುಜರಾತ್ ರಾಜ್ಯದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಗುಜರಾತ್‌ನ ಪೋರಬಂದರ್ ಜಿಲ್ಲೆಯ ರಣವಾವ್ ತಾಲ್ಲೂಕಿನ ನಿವಾಸಿ ಕೇಸುಬಾಯಿ ಮಿನಂದಾಬಾಯಿ ಸಿಸೋಡಿಯಾ (58) ಬಂಧಿತ ಆರೋಪಿ.
2001ರ ಮೇ 23ರಂದು ಯಲ್ಲಾಪುರದ ಕಾರವಾರ–ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ-63ರ ಜೋಗಿಕೊಪ್ಪ ರಸ್ತೆ ಕತ್ರಿ ಬಳಿ ಲಾರಿ ಚಾಲನೆ ಮಾಡಿಕೊಂಡು ಬಂದಿದ್ದ ಆರೋಪಿ, ಕೆಎಸ್‌ಆರ್‌ಟಿಸಿ ಬಸ್ ಚಾಲಕನೊಂದಿಗೆ ಜಗಳ ಮಾಡಿದ್ದ ಆರೋಪದ ಮೇರೆಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಪೂರ್ಣಗೊಳಿಸಿದ ಪೊಲೀಸರು ಆರೋಪಿಯ ವಿರುದ್ಧ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. 2001ರಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದ ಬಳಿಕ ಆರೋಪಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಹಲವು ಬಾರಿ ಆತನ ವಿಳಾಸಕ್ಕೆ ವಾರೆಂಟ್ ಜಾರಿಗೊಳಿಸಿದರೂ ಆತ ಪತ್ತೆಯಾಗಿರಲಿಲ್ಲ. ಬಳಿಕ ನ್ಯಾಯಾಲಯದಿಂದ ಉದ್ಘೋಷಣೆಯೂ ಹೊರಡಿಸಲಾಗಿತ್ತು.ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡ ಹಿನ್ನೆಲೆಯಲ್ಲಿ ಪ್ರಕರಣವು 12-04-2010ರಿಂದ ಎಲ್.ಪಿ.ಸಿ ಆಗಿ ದಾಖಲಾಗಿತ್ತು.
ಪಿ.ಎಸ್.ಐ ಸಿದ್ದಪ್ಪ ಗುಡಿ ನೇತೃತ್ವದಲ್ಲಿ ಪತ್ತೆ ಕಾರ್ಯ:
ಆರೋಪಿಯ ಪತ್ತೆ ಕಾರ್ಯವನ್ನು ಮುಂದುವರಿಸಿದ ಪೊಲೀಸರು ಆತನ ಇರುವಿಕೆಯ ಬಗ್ಗೆ ಖಚಿತ ಮಾಹಿತಿ ಪಡೆದು ಗುಜರಾತ್ ರಾಜ್ಯದ ರಣವಾವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಿದ್ದಾರೆ. ಪಿ.ಎಸ್.ಐ ಸಿದ್ದಪ್ಪ ಗುಡಿ ಅವರ ನೇತೃತ್ವದಲ್ಲಿ ಹಾಗೂ ಗುಜರಾತ್‌ಗೆ ತೆರಳಿದ ಪೊಲೀಸ್ ಸಿಬ್ಬಂದಿ ರಾಘವೇಂದ್ರ ಮೂಳೆ ಮತ್ತು ಮಾರುತಿ ಅವರ ಸತತ ಪ್ರಯತ್ನದಿಂದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಯಿತು. ಆರೋಪಿಯನ್ನು ಆಗಸ್ಟ್ 25, 2026ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.
ಉತ್ತರಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎನ್., ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ. ಕೃಷ್ಣಮೂರ್ತಿ, ಶಿರಸಿ ಡಿವೈಎಸ್‌ಪಿ ಗೀತಾ ಪಾಟೀಲ ಹಾಗೂ ಪಿಐ ರಮೇಶ ಹನಾಪುರ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐಗಳಾದ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ ಹಾಗೂ ಮಹಾವೀರ ಕಾಂಬಳೆ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಈ ಪತ್ತೆ ಕಾರ್ಯಕ್ಕೆ ಸಂತೋಷ ಬಾಳೇರ, ಬಸವರಾಜ ಡಿ.ಕೆ. ಪರಮೇಶ್ವರ ಎಸ್.ಕೆ. ಹಾಗೂ ರೇಖಾ ಎಂ.ಎಸ್. ಅವರು ಸಹಕರಿಸಿದ್ದಾರೆ.ಅಂಕೋಲಾ ಪೊಲೀಸ್ ಠಾಣೆಯ ಅಪರಾಧ ಸಿಬ್ಬಂದಿಯಾದ ಮಹಮದ್ ಶಫೀ ಶೇಖ್ ಹಾಗೂ ಕಾರವಾರದ ಟೆಕ್ನಿಕಲ್ ಶೆಲ್ ವಿಭಾಗದ ಸಿಬ್ಬಂದಿಗಳಾದ ಉದಯ ಗುನಗ, ಬಬನ್ ಡಿ. ಕದಂ ಮತ್ತು ಮಹಾಲಿಂಗ ಸಾವಳಗಿ ಅವರು ಕೂಡ ಆರೋಪಿಯ ಪತ್ತೆ ಕಾರ್ಯಕ್ಕೆ ಸಹಕರಿಸಿದ್ದಾರೆ.
ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಶ್ರಮಿಸಿದ ಅಧಿಕಾರಿ ಹಾಗೂ ಪತ್ತೆ ಕಾರ್ಯಕ್ಕೆ ಸಹಕರಿಸಿದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಉತ್ತರಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.




