Home Crime ಯುವಕನ ಮೇಲೆ ತಂಡದಿಂದ ಹಲ್ಲೆ; ನಾಲ್ವರ ವಿರುದ್ಧ ಪ್ರಕರಣ ದಾಖಲು

ಯುವಕನ ಮೇಲೆ ತಂಡದಿಂದ ಹಲ್ಲೆ; ನಾಲ್ವರ ವಿರುದ್ಧ ಪ್ರಕರಣ ದಾಖಲು

ಬೈಂದೂರು, ಜೂ.16: ವೈಯಕ್ತಿಕ ವಿಚಾರವೊಂದನ್ನು ಮುಂದಿಟ್ಟುಕೊಂಡು ಯುವಕನೊಬ್ಬನ ಮೇಲೆ ನಾಲ್ವರು ಸೇರಿ ಹಲ್ಲೆ ನಡೆಸಿದ ಘಟನೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ತೊಂಡೆಮಕ್ಕಿಯಲ್ಲಿ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ಪೊಲೀಸರ ಮಾಹಿತಿಯಂತೆ, ತೊಂಡೆಮಕ್ಕಿ ಸೂರ್ಕುಂದ ನಿವಾಸಿ ರಾಘವೇಂದ್ರ ದೇವಾಡಿಗ (26) ಅವರು ಮನೆಯಲ್ಲಿ ಇದ್ದಾಗ ಆರೋಪಿ ರಾಜೇಶ್ ದೇವಾಡಿಗನು ಪ್ರದೀಪ್‌ನ ಮೊಬೈಲ್ ಮೂಲಕ ಕರೆ ಮಾಡಿ, ಮಾತನಾಡಬೇಕಿದ್ದು ತೊಂಡೆಮಕ್ಕಿಯ ಶಾರದಾ ವೇದಿಕೆಯ ಬಳಿ ಬರಲು ತಿಳಿಸಿದ್ದಾನೆ.

ಅದರಂತೆ, ಜೂನ್ 12ರಂದು ಮಧ್ಯಾಹ್ನ 3:45ರ ಸುಮಾರಿಗೆ ರಾಘವೇಂದ್ರ ಅವರು ಶಾರದಾ ವೇದಿಕೆಯ ಬಳಿ ತೆರಳಿದ ವೇಳೆ ಆರೋಪಿಗಳಾದ ಪ್ರದೀಪ್ ಶೆಟ್ಟಿ, ರಾಜೇಶ್ ದೇವಾಡಿಗ, ಪ್ರಶಾಂತ ಮೋಗವೀರ ಹಾಗೂ ನಾಗರಾಜ ದೊಂಬೆ ಅಲ್ಲಿ ಸೇರಿಕೊಂಡಿದ್ದು, ಸಮಾನ ಉದ್ದೇಶದಿಂದ ಪಿರ್ಯಾದಿದಾರರನ್ನು ಸುತ್ತುವರಿದು ಕಾಲರ್ ಹಿಡಿದು ಅಡ್ಡಗಟ್ಟಿ ಕೈಯಿಂದ ಮುಖ ಹಾಗೂ ಕೆನ್ನೆಗೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಇದಲ್ಲದೆ, ಆರೋಪಿಗಳ ಪೈಕಿ ನಾಗರಾಜ ದೊಂಬೆ ತಾನು ಧರಿಸಿದ್ದ ಕೈಬಳೆಯ (ಖಡ್ಗ) ಮೂಲಕ ಮುಷ್ಟಿ ಬಿಗಿದು ಪಿರ್ಯಾದಿದಾರರ ಬೆನ್ನಿಗೆ ಗುದ್ದಿ ಹಲ್ಲೆ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಜೂನ್ 11ರಂದು  ತಮ್ಮ ಪರಿಚಯದ ನಾಗರಾಜನಿಗೆ, ಪ್ರದೀಪ್ ಶೆಟ್ಟಿಯೊಂದಿಗೆ ಸೇರಬೇಡ ಎಂದು ಹೇಳಿದ್ದ ವಿಚಾರವನ್ನು ನಾಗರಾಜನು ಪ್ರದೀಪ್ ಶೆಟ್ಟಿಗೆ ತಿಳಿಸಿದ್ದು, ಇದೇ ದ್ವೇಷದ ಹಿನ್ನೆಲೆಯಲ್ಲಿ ಇತರರೊಂದಿಗೆ ಸೇರಿ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.

ಹಲ್ಲೆಯಿಂದ ಗಾಯಗೊಂಡ ರಾಘವೇಂದ್ರ ದೇವಾಡಿಗ ಅವರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆಯಲ್ಲಿರುವ ಸಂದರ್ಭದಲ್ಲೇ ಘಟನೆ ಕುರಿತು ದೂರು ನೀಡಿದ್ದಾರೆ.

ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 82/2026ರಲ್ಲಿ ಬಿಎನ್‌ಎಸ್ ಕಲಂ 118(1), 115(2), 126(2) ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.