ಉಡುಪಿ : “ಪ್ರತಿ ವರ್ಷ ನವೆಂಬರ್ ಒಂದರಂದು ಆಚರಿಸಲಾಗುತ್ತಿರುವ ಕನ್ನಡ ರಾಜ್ಯೋತ್ಸವ ದಿನಾಚರಣೆಯಂದು ಉಡುಪಿ ಜಿಲ್ಲೆಯ ವಿವಿಧ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿರುವಂತಹ ಸಾಧಕರನ್ನು ಗುರುತಿಸಿ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವುದು ಮೊದಲಿಂದ ಬಂದಿರುವ ಸಂಪ್ರದಾಯ ವಾಗಿರುತ್ತದೆ.
ಉಡುಪಿ ಜಿಲ್ಲಾಡಳಿತ ಕಚೇರಿಯಿಂದ ಈ ಸಲದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ರದ್ದಾಗಿದೆ ಎಂಬ ಮಾಹಿತಿ ಬಂದಿದ್ದು, ಇದನ್ನು ಕರ್ನಾಟಕ ರಕ್ಷಣಾ ವೇದಿಕೆ ಬಲವಾಗಿ ಖಂಡಿಸುತ್ತಿದೆ.
ಉಡುಪಿ ಜಿಲ್ಲೆಯಲ್ಲಿ ಕನ್ನಡ ಕೋಸ್ಕರ ದುಡಿದವರಿಲ್ಲವೇ, ಅಥವಾ ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಕೊರತೆ ಇದೆಯೇ ಎಂಬ ಪ್ರಶ್ನೆಯನ್ನು ಈ ಮೂಲಕ ಜಿಲ್ಲಾಡಳಿತವನ್ನು ಕೇಳಬೇಕಾದ ಸನ್ನಿವೇಶ ನಮ್ಮ ಮುಂದಿದೆ.
ಹಲವಾರು ವಿಚಾರಗಳಲ್ಲಿ ಸರ್ವಾಧಿಕಾರತ್ವ ಧೋರಣೆಯನ್ನು ತೋರಿಸುತ್ತಿರುವ ಉಡುಪಿ ಜಿಲ್ಲಾಡಳಿತ ಹಾಗೂ ಸರಕಾರದ ಈ ನಿರ್ಧಾರ ಸಮಸ್ತ ಕನ್ನಡಿಗರಿಗೆ ಮಾಡಿರುವ ಅವಮಾನವಾಗಿದ್ದು ಕೂಡಲೇ ಜಿಲ್ಲಾಡಳಿತ ಅಥವಾ ಸಂಬಂಧಪಟ್ಟ ಇಲಾಖೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವ ವ್ಯವಸ್ಥೆಯನ್ನು ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಸಂಘಟನೆ ವತಿಯಿಂದ ಆಗ್ರಹಿಸಲಾಗುತ್ತಿದೆ” ಎಂದು ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣ್ ಶೆಟ್ಟಿ ಬಣ) ಗೌರವ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಇವರು ಹೇಳಿದ್ದಾರೆ.



