ಉಡುಪಿ: ಮ್ಯಾಟ್ರಿಮೋನಿ ಆಪ್ನಲ್ಲಿ ಪರಿಚಯವಾದ ಯುವತಿಯೊಬ್ಬಳು ವಿವಾಹದ ನೆಪದಲ್ಲಿ ಯುವಕನಿಗೆ ಬೆದರಿಸಿ 42.97 ಲಕ್ಷ ರೂ. ವಸೂಲಿ ಮಾಡಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.
ಪಿರ್ಯಾದಿದಾರ ಪ್ರದೀಪ್ ಕೆ, ಉಡುಪಿಯ ನಿರ್ಮಾಣ್ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದಲ್ಲಿ ಕೆಲಸ ಮಾಡುತ್ತಿದ್ದಾರೆ. 2023ರ ಕೊನೆ ಹಾಗೂ 2024 ಜನವರಿಯಲ್ಲಿ ಕನ್ನಡ ಜೋಡಿ ಮ್ಯಾಟ್ರಿಮೋನಿ ಆಪ್ನಲ್ಲಿ ಬೆಂಗಳೂರಿನ ಬಸವೇಶ್ವರ ನಗರದ ಎಸ್. ಕಡಂಬಿ ವಿದ್ಯಾ ಕೇಂದ್ರದಲ್ಲಿ ಕನ್ನಡ ಶಿಕ್ಷಕಿ ಎಂದು ಹೇಳಿಕೊಂಡ ಬೈಂದೂರು ತಾಲೂಕಿನ ಬಡಬೆಟ್ಟು ಹೆಣ್ಬೇರು ನಿವಾಸಿ ನಾಗರತ್ನ H ಎಂಬುವವರು ಪರಿಚಯವಾಗಿದ್ದರು. ವಿವಾಹದ ಪ್ರಸ್ತಾಪವನ್ನು ಪ್ರದೀಪ್ ನಿರಾಕರಿಸಿದ್ದರು.
ಆದರೂ ನಂತರ ಫೋನ್, ಮೆಸೇಜ್ ಮಾಡಿ ಕಷ್ಟ ಹೇಳಿಕೊಂಡು, ಜನವರಿ 2024 ರಿಂದ ಜನವರಿ 2026 ರ ನಡುವೆ ತನ್ನ ಖಾತೆಗೆ, ತನ್ನ ಸಹೋದ್ಯೋಗಿ ಹೇಮಂತ್ ಕರ್ಕೇರಾ, ಚಿಕ್ಕಮ್ಮನ ಮಗ ಪ್ರಮೋದ್ ಮತ್ತು ಅಕ್ಕ ರೇಣುಕಾ ಅವರ ಖಾತೆಗಳಿಗೆ ಬ್ಯಾಂಕ್ ಮೂಲಕ ಒಟ್ಟು 42,97,350 ರೂ. ಹಾಕಿಸಿಕೊಂಡಿದ್ದಾರೆ.
ಹಣ ವಾಪಸ್ ಕೇಳಿದಾಗ “ನಿಮ್ಮಿಬ್ಬರಿಗೂ ಅಕ್ರಮ ಸಂಬಂಧ ಇದೆ ಎಂದು ಸುಳ್ಳು ಕೇಸ್ ಹಾಕುತ್ತೇನೆ, ನಿಮ್ಮ ಕಚೇರಿಗೆ ಬಂದು ಮಾನ ಹರಾಜು ಹಾಕುತ್ತೇನೆ, ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ, ಸಂಸ್ಥೆಯ ಹಣ ದುರುಪಯೋಗ ಎಂದು ಆರೋಪ ಮಾಡುತ್ತೇನೆ” ಎಂದು ಬೆದರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಮಾರ್ಗದರ್ಶನದಲ್ಲಿ PSI ಭರತೇಶ್ ಕಂಕಣವಾಡಿ, PSI ರತ್ನಾಕರ ಕೆ, HC ಪ್ರಸನ್ನ ಸಿ, ಜೀವನ್ ಕುಮಾರ್, ಜಗನ್ನಾಥ ನಾಯ್ಕ, PC ಹೇಮಂತ್ ಕುಮಾರ್, ಮಹಿಳಾ PC ಸವಿತಾ ಅವರನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು.
ತಂಡ ಅ.26 ರಂದು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಬಸವೇಶ್ವರ ನಗರದಲ್ಲಿ ಕಾರ್ಯಾಚರಣೆ ನಡೆಸಿ
ನಾಗರತ್ನ H (42), ಪ್ರಸ್ತುತ ಲಕ್ಷ್ಮೀ ಪಿ.ಜಿ., ಬಸವೇಶ್ವರ ನಗರ, ಬೆಂಗಳೂರು, ಖಾಯಂ ವಿಳಾಸ: ಮಯ್ಯಾಡಿ, ಬೈಂದೂರು,
ಹೇಮಂತ (41), ಪ್ರಸ್ತುತ ಬಾಲಾಜಿ ಲಾಡ್ಜ್, ಮೆಜೆಸ್ಟಿಕ್, ಬೆಂಗಳೂರು, ಖಾಯಂ ವಿಳಾಸ: ಮಿರ್ಯಾರು, ಕಾರ್ಕಳ
ಇವರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇತರ ಆರೋಪಿಗಳ ಪತ್ತೆಗೆ ಶೋಧ ನಡೆಯುತ್ತಿದೆ.



