ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರ ಮಧ್ಯದ ಜನಸಂದಣಿ ಪ್ರದೇಶಕ್ಕೆ ಕೋತಿಯೊಂದು ಎಲ್ಲಿಂದಲೋ ಬಂದಿದ್ದು, ಬೀದಿನಾಯಿಗಳು ದಾಳಿ ಮಾಡಿ ಗಾಯಗೊಳಿಸಿದ ಘಟನೆ ಸಂಭವಿಸಿದೆ.
ನಗರದ ಕೋರ್ಟ್ ರೋಡ್‌ನಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಸಕಾಲದಲ್ಲಿ ಚಿಕಿತ್ಸೆ ಸಿಕ್ಕಿದ ಕಾರಣ ಮಂಗ ಬದುಕುಳಿದಿದೆ.
ನಗರದ ಕಾಲೇಜೊಂದರಲ್ಲಿ ಕಲಿಯುತ್ತಿರುವ ಚಂದನ್ ಎಂಬ ವಿದ್ಯಾರ್ಥಿ ಕೋರ್ಟ್ ರಸ್ತೆಯಲ್ಲಿ ಹೋಗುತ್ತಿರುವಾಗ ಕೋತಿಯೊಂದು ಗಾಯಗೊಂಡು ನರಳಾಡುತ್ತಿರುವುದು ಕಂಡುಬಂತು.
ಪರಿಶೀಲಿಸಿದಾಗ ಇದು ನಾಯಿ ದಾಳಿ ಮಾಡಿದ ಗಾಯವೆಂದು ತಿಳಿಯಿತು. ರಿಕ್ಷಾ ಚಾಲಕರಾದ ಶಿವಪ್ಪ ಮತ್ತು ಜಗದೀಶ ರೈ ಎಂಬವರು ಸೇರಿ ಗಾಯಾಳು ಕೋತಿಯನ್ನು ಪಶು ಆಸ್ಪತ್ರೆಗೆ ಸಾಗಿಸಿದರು.
ಅರಣ್ಯ ಇಲಾಖೆ ಅನುಮತಿ ಇಲ್ಲದೆ ನಾವು ಚಿಕಿತ್ಸೆ ನೀಡಲಾಗದು ಎಂದು ಅಲ್ಲಿನ ವೈದ್ಯಕೀಯ ಸಿಬ್ಬಂದಿ ಹೇಳಿದ ಕಾರಣ ಬಳಿಕ ಅರಣ್ಯ ಇಲಾಖೆಗೆ ತಿಳಿಸಿ, ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲೇ ಪಶು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಪಶು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮಂಗ ಚೇತರಿಸಿಕೊಂಡಿದೆ ಎಂದು ತಿಳಿದು ಬಂದಿದೆ.
ನಾಯಿ ದಾಳಿಗೆ ತುತ್ತಾದ ಮಂಗನಿಗೆ ಪುತ್ತೂರು ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.



