Home Latest ಉಡುಪಿ ನಗರ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವ ಅನಾಗರಿಕರಿಗಾಗಿ ಶೋಧ…!!

ಉಡುಪಿ ನಗರ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವ ಅನಾಗರಿಕರಿಗಾಗಿ ಶೋಧ…!!

ಉಡುಪಿ: ನಗರ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವ ಅನಾಗರಿಕ ಪ್ರವೃತ್ತಿ ಮುಂದುವರಿದಿದೆ. ಕಸ ಎಸೆಯದಂತೆ ತಡೆಯಲು ನಗರಸಭೆ ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಸಹ ರಸ್ತೆ ಬದಿಯಲ್ಲಿ, ಚರಂಡಿ ಹಾಗೂ ಖಾಲಿ ನಿವೇಶನಗಳಲ್ಲಿ ಕಸ ಎಸೆಯುತ್ತಲೇ ಇದ್ದಾರೆ.

ನಗರ ಪ್ರದೇಶಗಳ ಪರಿಸರದ ಸ್ವಾಸ್ಥ್ಯ ಹದಗೆಡಿಸುವ ‘ಪರಿಸರ ಪಾತಕಿ’ಗಳ ಪತ್ತೆಗೆ ಉಡುಪಿ ನಗರಸಭೆ ವಿಶೇಷ ತಂಡ ರಚಿಸಿದೆ. ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನ-2.0 ಯೋಜನೆಯಡಿ ‘ಕಮ್ಯುನಿಟಿ ಮೊಬೈಲೈಸರ್ (ಸಮುದಾಯ ಸಂಘಟಕರು)’ ತಂಡ ರಚಿಸಿದೆ. ಈ ತಂಡ ‘ಕಸ ಪಾತಕಿ’ಗಳನ್ನು ಶೋಧಿಸಿ ದಂಡ ಹಾಕುತ್ತಿದೆ.

ನಗರಸಭಾ ವ್ಯಾಪ್ತಿಯ ಪರಿಸರದಲ್ಲಿ ಜನರು ಕಸ ಎಸೆಯುವುದನ್ನು ತಡೆಯಲು ‘ಸಮುದಾಯ ಸಂಘಟಕರು’ ನಿತ್ಯ ತೊಡಗಿಕೊಳ್ಳುತ್ತಾರೆ. ಇದಕ್ಕಾಗಿ 24 ಮಹಿಳೆಯರನ್ನೊಳಗೊಂಡ ಮೂರು ತಂಡ ರಚಿಸಲಾಗಿದೆ. ಇವರು ಉಡುಪಿ ನಗರ, ಮಣಿಪಾಲ ಹಾಗೂ ಮಲ್ಪೆಯಲ್ಲಿ ಕಾರ್ಯಾಚರಣೆ ನಡೆಸುತ್ತಾರೆ. ಮನೆಯ ಕಸವನ್ನು ಚರಂಡಿ ಅಥವಾ ರಸ್ತೆಯ ಪಕ್ಕ ಎಸೆದು ಹೋಗುವವರನ್ನು ಪತ್ತೆ ಮಾಡುತ್ತಾರೆ.

ಹೆಚ್ಚು ಕಸ ಎಸೆಯುವ ಸ್ಥಳ (ಬ್ಲಾಕ್ ಸ್ಪಾಟ್) ಗುರುತಿಸಿ, ಕಸ ತೆರವು ಮಾಡಿಸಿ ಮತ್ತೆ ಅಲ್ಲಿ ಕಸ ಎಸೆಯದಂತೆ ವ್ಯವಸ್ಥೆ ಮಾಡುತ್ತಾರೆ. ಕಸ ಪಾತಕಿಗಳನ್ನು ಪತ್ತೆ ಹಚ್ಚುವುದಷ್ಟೇ ಅಲ್ಲದೆ, ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನೂ ತಂಡದಲ್ಲಿರುವ ಮಹಿಳೆಯರು ಮಾಡುತ್ತಾರೆ. ಕಸ ಎಸೆದರೆ ಪರಿಸರ ಹಾನಿಯಾಗಿ ನಮಗೇ ಅನಾರೋಗ್ಯ ಉಂಟಾಗುತ್ತದೆ ಎಂಬ ವಿಚಾರವನ್ನೂ ಸಹ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಾರೆ.

ಉಡುಪಿ ತಾಲೂಕಿನ ಒಳಕಾಡು ವಾರ್ಡ್ನಲ್ಲಿ ಕಸ ಎಸೆದಿದ್ದ ಬಾಡಿಗೆ ಮನೆಯಲ್ಲಿದ್ದ ವ್ಯಕ್ತಿಯೋರ್ವರಿಗೆ 5 ಸಾವಿರ ರೂ. ದಂಡ ವಿಧಿಸಿ ವಸೂಲಿ ಮಾಡಿದ ಕಮ್ಯುನಿಟಿ ಮೊಬೈಲೈಸರ್.

ಮಣಿಪಾಲ, ಉಡುಪಿ ಹಾಗೂ ಮಲ್ಪೆಯ ವಿವಿಧ ವಾರ್ಡ್ಗಳಲ್ಲಿ ಸುಮಾರು 10 ಕಡೆಗಳಲ್ಲಿ ಸಿಸಿ ಕೆಮರಾ ಅಳವಡಿಸಲಾಗಿದ್ದು, ಅದನ್ನರಿತ ಜನರು ಬೇರೆಡೆ ಕಸ ಎಸೆಯುತ್ತಿದ್ದಾರೆ. ಎಲ್ಲಿ ಹೆಚ್ಚು ಕಸ ಎಸೆಯುತ್ತಿರುವ ಕುರಿತು ಸಾರ್ವಜನಿಕರ ದೂರು ಬರುತ್ತದೆಯೋ ಅಲ್ಲಿಯೂ ಕ್ಯಾಮರಾ ಅಳವಡಿಸಿ ‘ಕಸ ಪಾತಕಿ’ಗಳನ್ನು ಹಿಡಿಯಲಾಗುತ್ತಿದೆ. ಕಸ ಎಸೆಯುವವರನ್ನು ಪತ್ತೆ ಮಾಡಿ ಅವರಿಗೆ ಭಾರಿ ಪ್ರಮಾಣದಲ್ಲಿ ನಗರಸಭೆ ದಂಡವನ್ನೂ ವಿಧಿಸುತ್ತಿದೆ. ಕನಿಷ್ಠ 2 ಸಾವಿರ ರೂ., ಗರಿಷ್ಠ 5 ಸಾವಿರ ರೂ. ವರೆಗೂ ದಂಡ ಹಾಕಲಾಗುತ್ತಿದೆ. ತಿಳಿ ಹೇಳಿದರೂ ಪದೇಪದೆ ಕಸ ಎಸೆಯುತ್ತಿದ್ದ ವ್ಯಕ್ತಿಯೊಬ್ಬರಿಗೆ ಇತ್ತೀಚೆಗೆ 10 ಸಾವಿರ ರೂ. ದಂಡ ವಿಧಿಸಲಾಗಿದೆ. 2025ರ ಜುಲೈ ತಿಂಗಳಿಂದ 2026ರ ಜೂನ್ 15ರ ವರೆಗೆ ಕಸ ಎಸೆದವರಿಗೆ ವಿಧಿಸಿದ ದಂಡದ ಮೊತ್ತ ಒಟ್ಟು 4,76,600 ರೂ. ಸಂಗ್ರಹ ಆಗಿದೆ.

ತಮ್ಮ ಮನೆಯ ಕಸವನ್ನು ರಸ್ತೆಯ ಬದಿಯಲ್ಲಿ ಅಥವಾ ಮಳೆನೀರು ಹರಿಯುವ ಚರಂಡಿಯಲ್ಲಿ ಎಸೆದುಹೋಗುವ ಜನರ ಮನೆ ವಿಳಾಸವನ್ನೂ ‘ಕಮ್ಯುನಿಟಿ ಮೊಬೈಲೈಸರ್’ ತಂಡ ಪತ್ತೆ ಹಚ್ಚುತ್ತಿದೆ. ಅನೇಕರು ಆನ್ಲೈನ್ ಮೂಲಕ ವಿವಿಧ ವಸ್ತುಗಳನ್ನು ತರಿಸಿಕೊಂಡು ಬಳಿಕ ಅವರ ವಿಳಾಸವಿರುವ ಬಾಕ್ಸ್ ಅಥವಾ ಕವರ್ಗಳನ್ನು ಮನೆಯ ಹಸಿ-ಒಣ ಕಸದೊಂದಿಗೆ ಎಸೆದು ಹೋಗಿರುತ್ತಾರೆ. ಅಂತಹ ಕಸಗಳ ರಾಶಿಗಳಲ್ಲಿ ಜನರ ವಿಳಾಸ ಇರುವ ಕಸ ಎತ್ತಿಕೊಂಡು, ಅದರಲ್ಲಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಅವರಿಗೆ ದಂಡ ವಿಧಿಸುವ ಕೆಲಸ ಮಾಡಲಾಗುತ್ತಿದೆ.

ಉಡುಪಿಯ ನಾಗರಿಕರು ತಮ್ಮ ಮನೆಗಳ ಹಸಿ-ಒಣ ಕಸವನ್ನು ಎಲ್ಲೆಂದರಲ್ಲಿ ಎಸೆದು ಪರಿಸರದ ಸ್ವಚ್ಛತೆ ಹದಗೆಡಿಸಬಾರದು. ತಮ್ಮ ಮನೆ ಬಾಗಿಲೆಗೇ ಬರುವ ನಗರಸಭೆಯ ವಾಹನಗಳಿಗೇ ಕಸ ನೀಡಿ ಸಹಕರಿಸಬೇಕು. ಯಾರಾದರೂ ತಮ್ಮ ವಾರ್ಡ್ಗಳಲ್ಲಿ ಕಸ ಎಸೆದು ಹೋಗುತ್ತಿದ್ದರೆ ತಡೆಯಿರಿ. ಅಥವಾ ಅವರ ಕುರಿತು ನಮಗೆ ಮಾಹಿತಿ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. — ಮಹಾಂತೇಶ್ ಹಂಗರಗಿ. ನಗರಸಭೆ ಪೌರಾಯುಕ್ತ.