ಮಣಿಪಾಲ: ಹಠಾತ್ ಬೆನ್ನು ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಸಂಭವಿಸಿದೆ.
ಒಡಿಶಾ ಮೂಲದ ಎಂಐಟಿ ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಆಕಾಂಕ್ಷಾ ಮೋಹಾಂತಿ (25) ಮೃತಪಟ್ಟವರು.
ನ. 29ರಂದು ರಾತ್ರಿ ಮಣಿಪಾಲದ ಹೊಟೇಲೊಂದರಲ್ಲಿ ಊಟ ಮಾಡಿ ವಾಸ್ತವ್ಯದ ಕೊಠಡಿಗೆ ತೆರಳಿದ ಆಕೆಗೆ ಏಕಾಏಕಿ ಗಂಭೀರ ಸ್ವರೂಪದಲ್ಲಿ ಬೆನ್ನು ನೋವು ಕಾಣಿಸಿಕೊಂಡಿತು. ನಡೆದಾಡಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದ ಅವರನ್ನು ತತ್‌ಕ್ಷಣ ಸ್ನೇಹಿತರು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ದರು.
ಪರೀಕ್ಷಿಸಿದ ವೈದ್ಯರು ಯುವತಿ ಈಗಾಗಲೇ ಕೊನೆಯುಸಿರೆಳೆದಿರುವುದಾಗಿ ತಿಳಿಸಿದರು.
ಸಾವಿಗೆ ಹೃದಯಾಘಾತ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



