Home Crime ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದ ಯುವಕ ಸಮುದ್ರ ಪಾಲು…!!

ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದ ಯುವಕ ಸಮುದ್ರ ಪಾಲು…!!

ಕುಮಟಾ, ಜೂನ್ 16: ಯುವಕನೊಬ್ಬ ಬೃಹತ್  ಸಮುದ್ರದ ಅಲೆಯಲ್ಲಿ ಕೊಚ್ಚಿಹೋಗಿ ಮೃತಪಟ್ಟಿರುವ ದುರ್ಘಟನೆ ಕುಮಟಾದ ಕಡ್ಲೆ ಕಡಲ ತೀರದಲ್ಲಿ ನಡೆದಿದೆ.

ಮೃತ ಯುವಕನನ್ನು ಮಹಾರಾಷ್ಟ್ರದ ಪುಣೆ ಮೂಲದ ಜೀವನ್ ಭಟ್ಟರಾಯಿ (26) ಎಂದು ಗುರುತಿಸಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಜೀವನ್ ಭಟ್ಟರಾಯಿ ತನ್ನ ಐದು ಮಂದಿ ಸ್ನೇಹಿತರೊಂದಿಗೆ ಪ್ರವಾಸಕ್ಕಾಗಿ ಕುಮಟಾ ಭಾಗಕ್ಕೆ ಬಂದಿದ್ದನು. ಕಳೆದ ಮೂರು ದಿನಗಳಿಂದ ಸ್ಥಳೀಯ ಖಾಸಗಿ ರೆಸಾರ್ಟ್‌ವೊಂದರಲ್ಲಿ ತಂಗಿದ್ದ ಈ ತಂಡ, ಮಂಗಳವಾರ ಕಡ್ಲೆ ಕಡಲ ತೀರಕ್ಕೆ ಭೇಟಿ ನೀಡಿತ್ತು.

ಸಮುದ್ರದ ಅಂಚಿನಲ್ಲಿ ಸ್ನೇಹಿತರು ಸೇರಿ ರೀಲ್ಸ್ ಚಿತ್ರೀಕರಿಸಲು ನೀರಿಗಿಳಿದಿದ್ದರು. ಚಿತ್ರೀಕರಣ ಮುಗಿದ ಬಳಿಕ ಉಳಿದವರು ದಂಡೆಯತ್ತ ಹಿಂದಿರುಗಿದರೆ, ಜೀವನ್ ಭಟ್ಟರಾಯಿ ಮಾತ್ರ ಸಮುದ್ರದ ನೀರಿನಲ್ಲಿ ಆಟವಾಡುತ್ತಾ ಅಲ್ಲೇ ಉಳಿದುಕೊಂಡಿದ್ದಾನೆ.

ಸ್ವಲ್ಪ ಸಮಯದ ಬಳಿಕ ಆತ ಕೂಡ ಹಿಂದಿರುಗಬಹುದು ಎಂದು ಭಾವಿಸಿದ್ದ ಸ್ನೇಹಿತರು ಮುಂದೆ ಸಾಗಿದ್ದಾರೆ. ಆದರೆ, ಇದೇ ವೇಳೆ ಅನಿರೀಕ್ಷಿತವಾಗಿ ಅಪ್ಪಳಿಸಿದ ಬೃಹತ್ ಅಲೆಗೆ ಸಿಲುಕಿದ ಜೀವನ್, ಕ್ಷಣಾರ್ಧದಲ್ಲೇ ಸಮುದ್ರದ ನೀರಿನಲ್ಲಿ ಕೊಚ್ಚಿಹೋಗಿದ್ದಾನೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಧಾವಿಸಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಘಟನೆ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ.