ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಹಣಕಾಸಿನ ವ್ಯವಹಾರದ ವೈಷಮ್ಯ ಹತ್ಯೆಯಲ್ಲಿ ಅಂತ್ಯಗೊಂಡಿದೆ.
ಜುಲೈ 30ರ ರಾತ್ರಿ ಆರಂಭವಾದ ಮಾತಿನ ಚಕಮಕಿ, ಜುಲೈ 31ರ ಮುಂಜಾನೆ ಭೀಕರ ತಿರುವು ಪಡೆದುಕೊಂಡಿದೆ. ಹಣಕಾಸಿನ ವ್ಯವಹಾರದ ವಿಚಾರವಾಗಿ ಡೆರಿಕ್ ಮತ್ತು ಐವನ್ ನಡುವೆ ಗಲಾಟೆ ನಡೆದಿದ್ದು, ಬಳಿಕ ಡೆರಿಕ್ ಲೊಕೇಶನ್ ಕಳುಹಿಸಿ ಕುಂದಾಪುರದ ಚರ್ಚ್ ರಸ್ತೆಯ ಹೋಲಿ ರೋಸಾರಿ ಚರ್ಚ್ ಎದುರಿಗೆ ಬರಲು ಸೂಚಿಸಿದ್ದಾನೆ ಎನ್ನಲಾಗಿದೆ.
ಮುಂಜಾನೆ ಸುಮಾರು 3:15ರ ವೇಳೆಗೆ ಸ್ಥಳಕ್ಕೆ ಥಾರ್ ಕಾರಿನಲ್ಲಿ ಬಂದ ಆರೋಪಿ ಡೆರಿಕ್, ಕಾರಿನಿಂದ ಇಳಿದ ಐವನ್ ಮೇಲೆ ಗನ್‌ನಿಂದ ಗುಂಡು ಹಾರಿಸಿದ್ದಾನೆ ಎಂದು ಪೊಲೀಸ್ ಮಾಹಿತಿ ತಿಳಿಸಿದೆ. ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡ ಐವನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹಣಕಾಸು ಹಾಗೂ ಇತರ ವ್ಯವಹಾರಗಳಿಗೆ ಸಂಬಂಧಿಸಿದ ಮನಸ್ತಾಪವೇ ಕೃತ್ಯಕ್ಕೆ ಕಾರಣ ಎಂದು ಶಂಕಿಸಲಾಗಿದೆ.
ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 67/2026ರಡಿ ಬಿಎನ್‌ಎಸ್ ಕಲಂ 103 ಹಾಗೂ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯ 3 ಮತ್ತು 25ನೇ ಕಲಂಗಳಡಿ ಪ್ರಕರಣ ದಾಖಲಾಗಿದೆ.
ಐವನ್ ಯಾನೆ ಮುನ್ನಾ ಈ ಹಿಂದೆ ಕುಕ್ಕಿಕಟ್ಟೆಯ ಪಿಟ್ಟಿ ನಾಗೇಶ ಕೊಲೆ ಕೇಸ್ ನಲ್ಲಿ ಆರೋಪಿಯಾಗಿದ್ದ.ಈತನ ಮೇಲೆ ಉಡುಪಿ ನಗರ ಠಾಣೆಯಲ್ಲಿ ರೌಡಿ ಶೀಟ್ ಇತ್ತು. ಮುನ್ನಾ ಮೊದಲು ಪಿಟ್ಟಿ ನಾಗೇಶ್ ನ ಡೈವರ್ ಆಗಿದ್ದ.ಯಾವುದೋ ದ್ವೇಷದಿಂದ ಪಿಟ್ಟಿ ನಾಗೇಶ್ ಕೊಲೆಯಲ್ಲಿ ಭಾಗಿಯಾಗಿದ್ದ.ಪಿಟ್ಟಿ ನಾಗೇಶ್ ನ ತಂಡ ಈತನ ಹತ್ಯೆಗಾಗಿ ಕೆಲವು ಬಾರಿ ಸಂಚು ರೂಪಿಸಿತ್ತು.ಆದರೆ ಇಂದು ಮುನ್ನಾ ಕುಂದಾಪುರದಲ್ಲಿ ಕೊಲೆಯಾಗಿದ್ದಾನೆ.
ಆರೋಪಿ ಡೆರಿಕ್ ಕ್ರಾಸ್ತಾ ಪತ್ತೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.









