ಚಾಮರಾಜನಗರ : ಬದನಗುಪ್ಪೆ ಕೆಲ್ಲಂಬಳ್ಳಿ ಕೈಗಾರಿಕೆ ಪ್ರದೇಶದ ಕರಿಕಲ್ಲು ಫ್ಯಾಕ್ಟರಿಗೆ ಕೂಲಿ ಕೆಲಸಕ್ಕೆ ಬಂದಿದ್ದ ರಾಜಸ್ಥಾನದ ವ್ಯಕ್ತಿಯೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಚಾಮರಾಜನಗರ – ನಂಜನಗೂಡು ಮುಖ್ಯ ರಸ್ತೆಯಲ್ಲಿ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಕಿಶನ್ ಲಾಲ್ ಬೈರವ ಎಂದು ಗುರುತಿಸಲಾಗಿದೆ.
ಕಳೆದ ಮೂರು ತಿಂಗಳ ಹಿಂದೆ ರಾಜಸ್ಥಾನದ ಸುಮಾರು 20 ಕಾರ್ಮಿಕರು ಬದನಗುಪ್ಪೆ ಗ್ರಾಮದ ಸಮೀಪದ ಕರಿಕಲ್ಲು ಫ್ಯಾಕ್ಟರಿಗಳಿಗೆ ಕೆಲಸಕ್ಕೆ ಸೇರಿಕೊಂಡಿದ್ದರು. ಇವರು ಸಮೀಪದ ಬದನಗುಪ್ಪೆ ಬಳಿ ರೂಂ ಪಡೆದುಕೊಂಡು ವಾಸವಾಗಿದ್ದರು.
ಎರಡು ದಿನಗಳಿಂದ ಕೆಲಸ ಹೋಗದೆ ರೂಂನಲ್ಲಿದ್ದ ಕಿಶನ್ ಲಾಲ್ ಬೈರವ ಹಾಗೂ ಸುರೇಂದರ್ ಲಾಲ್ ರವರು ದಿನ ನಿತ್ಯದ ಸಾಮಗ್ರಿ ತರಲು ಬೈಕ್ ನಲ್ಲಿ ಮಂಗಳವಾರ ಸಂಜೆ ಹೊರಟಿದ್ದರು ಎನ್ನಲಾಗಿದೆ.
ದಾರಿ ಮಧ್ಯೆ ತರಕಾರಿ ತುಂಬಿದ ವಾಹನಕ್ಕೆ ಢಿಕ್ಕಿ ಹೊಡೆದು ಕಿಶನ್ ಲಾಲ್ ಬೈರವ ಸ್ಥಳದಲ್ಲೇ ಮೃತಪಟ್ಟರು. ಮತ್ತೊಬ್ಬ ಕೂಲಿ ಕಾರ್ಮಿಕ ಸುರೇಂದರ್ ಲಾಲ್ ಗೆ ಗಾಯಗಳಾಗಿದ್ದು, ಸಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಸಂಚಾರ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ ಪೆಕ್ಟರ್ ಲಿಂಗರಾಜು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಪಘಾತ ನಡೆಸಿದ ತರಕಾರಿ ತುಂಬಿದ ವಾಹನವನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.



