Home Karnataka News ತರಗತಿ ನಡೆಯುತ್ತಿದ್ದಾಗಲೇ ಮೇಲ್ಚಾವಣಿ ಕುಸಿತ : ಐವರು ವಿದ್ಯಾರ್ಥಿನಿಯರಿಗೆ ಗಾಯ…!!

ತರಗತಿ ನಡೆಯುತ್ತಿದ್ದಾಗಲೇ ಮೇಲ್ಚಾವಣಿ ಕುಸಿತ : ಐವರು ವಿದ್ಯಾರ್ಥಿನಿಯರಿಗೆ ಗಾಯ…!!

ಕಲಬುರಗಿ: ನಗರದ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನಲ್ಲಿ ಶುಕ್ರವಾರ ಬೆಳಿಗ್ಗೆ ಆತಂಕಕಾರಿ ಘಟನೆ ಸಂಭವಿಸಿದೆ. ತರಗತಿ ನಡೆಯುತ್ತಿದ್ದ ವೇಳೆ ಮೇಲ್ಚಾವಣಿಯ ಸಿಮೆಂಟ್ ಪದರು ಏಕಾಏಕಿ ಕುಸಿದು ಬಿದ್ದ ಪರಿಣಾಮ ಐವರು ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ.

ಎಸ್‌ಪಿ ಕಚೇರಿ ಸಮೀಪದ ಕಾಲೇಜಿನ ಪ್ರಥಮ ಪಿಯುಸಿ ಕಾಮರ್ಸ್ ವಿಭಾಗದ ತರಗತಿಯಲ್ಲಿ ಸುಮಾರು 80ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪಾಠ ಆಲಿಸುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಭಾರಿ ಶಬ್ದದೊಂದಿಗೆ ಮೇಲ್ಚಾವಣಿಯ ಸಿಮೆಂಟ್ ಪದರು ವಿದ್ಯಾರ್ಥಿನಿಯರ ಮೇಲೆ ಬಿದ್ದ ಪರಿಣಾಮ ಪೂಜಾ, ಸೃಷ್ಟಿ, ನಿಶಾ, ಶೀತಲ್ ಸೇರಿದಂತೆ ಐವರು ಗಾಯಗೊಂಡಿದ್ದಾರೆ.

ಘಟನೆಯಿಂದ ಭಯಭೀತರಾದ ವಿದ್ಯಾರ್ಥಿನಿಯರು ಪ್ರಾಣಭಯದಿಂದ ತರಗತಿಯಿಂದ ಹೊರಗೆ ಓಡಿ ಬಂದಿದ್ದು, ಈ ದೃಶ್ಯಗಳು ಕಾಲೇಜಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಸದ್ಯ ಅವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿವೆ.

ಗಾಯಗೊಂಡ ವಿದ್ಯಾರ್ಥಿನಿಯರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅವರ ತಲೆ, ಬೆನ್ನು ಹಾಗೂ ಮೊಣಕೈ ಭಾಗಗಳಿಗೆ ಪೆಟ್ಟಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ವಿಷಯ ತಿಳಿಯುತ್ತಿದ್ದಂತೆಯೇ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 2016ರಲ್ಲಿ ನಿರ್ಮಾಣಗೊಂಡ ಈ ಕಟ್ಟಡದಲ್ಲಿ ಕಳಪೆ ಕಾಮಗಾರಿ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೇವಲ ಹತ್ತು ವರ್ಷಗಳ ಹಿಂದೆಯಷ್ಟೇ ನಿರ್ಮಾಣಗೊಂಡ ಸರ್ಕಾರಿ ಕಟ್ಟಡದ ಮೇಲ್ಚಾವಣಿ ಕುಸಿದು ಬಿದ್ದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ತಪ್ಪಿತಸ್ಥ ಗುತ್ತಿಗೆದಾರರು ಹಾಗೂ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೋಷಕರು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.