Home Crime ಕಾಸರಗೋಡು : ಜಿಂಕೆ ಬೇಟೆ – ಇಬ್ಬರು ಆರೋಪಿಗಳ ಬಂಧನ…!!

ಕಾಸರಗೋಡು : ಜಿಂಕೆ ಬೇಟೆ – ಇಬ್ಬರು ಆರೋಪಿಗಳ ಬಂಧನ…!!

ಕಾಸರಗೋಡು : ಜಿಲ್ಲೆಯ ರಕ್ಷಿತಾರಣ್ಯ ಪ್ರದೇಶದಿಂದ ಜಿಂಕೆ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಇಬ್ಬರು ಪ್ರಮುಖ ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದು, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಕರಿಕ್ಕೆ ನಿವಾಸಿಗಳಾದ ಎಂ.ಎ. ಸುಬೀರ್ (46) ಮತ್ತು ನೌಫಲ್ (37) ಬಂಧಿತ ಆರೋಪಿಗಳು.

ನಿರೀಕ್ಷಣಾ ಜಾಮೀನು ಕೋರಿ ಇವರು ಸಲ್ಲಿಸಿದ್ದ ಅರ್ಜಿಯನ್ನು ಜಿಲ್ಲಾ ಸೆಷನ್ಸ್ ನ್ಯಾಯಾಲಯವು ವಜಾಗೊಳಿಸಿದ ಬೆನ್ನಲ್ಲೇ, ಆರೋಪಿಗಳು ಅರಣ್ಯ ಇಲಾಖೆ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ. ಸೆಪ್ಟೆಂಬರ್ 10ರಂದು ಪನತ್ತಡಿ ರಕ್ಷಿತಾರಣ್ಯ ಪ್ರದೇಶದಲ್ಲಿ ಬೇಟೆಗಾರರ ತಂಡವೊಂದು ನುಗ್ಗಿರುವ ಬಗ್ಗೆ ಅರಣ್ಯ ಇಲಾಖೆಗೆ ಖಚಿತ ಮಾಹಿತಿ ಲಭಿಸಿತ್ತು.

ದಾಳಿ ನಡೆಸಿದಾಗ ಬೇಟೆಗಾರರ ತಂಡವು ಕಾಡಿನಲ್ಲಿ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು ಈ ವೇಳೆ ಅರಣ್ಯ ಸಿಬ್ಬಂದಿ ಬೆನ್ನಟ್ಟಿ ಓರ್ವ ಆರೋಪಿಯನ್ನು ಸ್ಥಳದಲ್ಲೇ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದರು.

ಆತನಿಂದ ನಾಡಕೋವಿ, ಒಂದು ಸಜೀವ ಗುಂಡು, ಎರಡು ಕತ್ತಿ ಹಾಗೂ ಎರಡು ಟಾರ್ಚ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆರೋಪಿಯ ಮನೆಯ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಸುಮಾರು 40 ಕೆ.ಜಿ.ಯಷ್ಟು ಜಿಂಕೆ ಮಾಂಸವನ್ನು ವಶಕ್ಕೆ ಪಡೆದಿದ್ದರು.

ಬಂಧಿತ ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಈ ಸುಬೀರ್ ಮತ್ತು ನೌಫಲ್ ಬಗ್ಗೆ ಮಾಹಿತಿ ಲಭಿಸಿತ್ತು . ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಾಗುತ್ತಿದ್ದಂತೆ ಬಂಧನವಾದ ಇವರಿಬ್ಬರು ನಿರೀಕ್ಷಣಾ ಜಾಮೀನಿಗಾಗಿ ನ್ಯಾಯಾಲಯದ ಮೊರೆ ಹೋಗಿದ್ದರು.

ಆದರೆ ನ್ಯಾಯಾಲಯ ಜಾಮೀನು ತಿರಸ್ಕರಿಸಿದ ಹಿನ್ನಲೆಯಲ್ಲಿ ಇಬ್ಬರು ಶರಣಾಗಿದ್ದಾರೆ. ಈ ಬೇಟೆ ಜಾಲದಲ್ಲಿ ಇನ್ನುಳಿದ ಆರೋಪಿಗಳು ಭಾಗಿಯಾಗಿದ್ದಾರೆಯೇ ಎಂಬ ಕುರಿತು ತನಿಖೆ ಮುಂದುವರಿದಿದೆ ಎಂದು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.