Home Karkala News ಹಿಂದು ಸಮಾಜದ ಭದ್ರ ಬುನಾದಿಗೆ ಗುರುಕುಲ ಮಾದರಿಯ ಶಿಕ್ಷಣ ಅಗತ್ಯ- ಕೇಮಾರು ಶ್ರೀ..!!      

ಹಿಂದು ಸಮಾಜದ ಭದ್ರ ಬುನಾದಿಗೆ ಗುರುಕುಲ ಮಾದರಿಯ ಶಿಕ್ಷಣ ಅಗತ್ಯ- ಕೇಮಾರು ಶ್ರೀ..!!      

ಕಾರ್ಕಳ: ಹಿಂದೂ ಸಮಾಜದ ಭದ್ರ ಬುನಾದಿಗೆ ಗುರುಕುಲ ಮಾದರಿಯ ಶಿಕ್ಷಣ ವ್ಯವಸ್ಥೆ ಮತ್ತು ಕೂಡು ಕುಟುಂಬ ಅತ್ಯಂತ ಪ್ರಾಮುಖ್ಯವಾಗಿದೆ ಎಂದು ಶ್ರೀ ಕ್ಷೇತ್ರ ಕೇಮಾರಿನ ಶ್ರೀ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.

ಸಚ್ಚೇರಿಪೇಟೆಯ ಶ್ರೀ ಮಹಮ್ಮಾಯೀ ಅಮ್ಮನವರ ಅಶ್ವತ್ಥಕಟ್ಟೆಯಲ್ಲಿ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸೇವಾ ಟ್ರಸ್ಟ್ (ರಿ.) ಸಚ್ಚೇರಿಪೇಟೆ ಹಾಗೂ ಹಿಂದು ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಡೆದ 22ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು. ಹಿಂದಿನ ಕಾಲದಲ್ಲಿದ್ದ ಕೂಡು ಕುಟುಂಬ ಹಾಗೂ ಗುರುಕುಲ ಮಾದರಿಯ ಶಿಕ್ಷಣ ಸಂಪೂರ್ಣ ನಶಿಸಿಹೋಗಿದೆ. ಕೂಡು ಕುಟುಂಬ ಸಮಾಜದ ಬಹುಮುಖ್ಯ ಅಂಗವಾಗಿದ್ದು ಇದರಿಂದ ಸದಸ್ಯರೆಲ್ಲ ಪರಸ್ಪರ ಬೆರತು ಸಾಮಾಜಿಕವಾಗಿ ಸಮರ್ಥರಾಗುತ್ತಿದ್ದರು. ಆದರೆ ಇಂದು ಅಣ್ಣ-ತಮ್ಮಂದಿರು, ಗಂಡ ಹೆಂಡತಿ ಒಟ್ಟಿಗೆ ಇರದ ಪರಿಸ್ಥಿತಿ ಸಮಾಜದಲ್ಲಿ ನಿರ್ಮಾಣವಾಗಿದೆ ಎಂದರು. ಗುರುಕುಲ ಮಾದರಿಯ ಶಿಕ್ಷಣವು ಕೇವಲ ಅಂಕಗಳಿಕೆಯಲ್ಲದೆ, ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ, ಸಂಸ್ಕೃತಿ, ಸ್ವಾವಲಂಬನೆ ಮತ್ತು ಸಮಗ್ರ ವ್ಯಕ್ತಿತ್ವವನ್ನು ರೂಪಿಸುವ ಅಗತ್ಯ ಶಿಕ್ಷಣ ಪದ್ಧತಿಯಾಗಿದೆ. ಶಿಸ್ತು, ಪ್ರಕೃತಿ ಸ್ನೇಹಿ ವಾತಾವರಣ, ಮತ್ತು ಗುರು-ಶಿಷ್ಯರ ನಡುವಿನ ಆತ್ಮೀಯ ಬಾಂಧವ್ಯದ ಮೂಲಕ ಇದು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜವಾಬ್ದಾರಿಯುತ ನಾಗರಿಕರನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪಡೆದ ಪೊಸ್ರಾಲು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಮಂಡಳಿಯನ್ನು ಗೌರವಿಸಲಾಯಿತು.

ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಶ್ರೀ ಭುವನಾಭಿರಾಮ ಉಡುಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಪ್ರಶಾಂತ್ ಕಾಮತ್ ಕಾರ್ಕಳ, ಎಮ್ಆರ್‌ಪಿಎಲ್- ಒಎನ್‌ಜಿಸಿ ಕರ್ಮಾಚಾರಿ ಸಂಘದ ಅಧ್ಯಕ್ಷ ಪ್ರಸಾದ್ ಎನ್ ಅಂಚನ್, ಉದ್ಯಮಿ ಬೋಜ ಸುವರ್ಣ ಸೂರತ್, ಉದ್ಯಮಿ ಭಾಸ್ಕರ್ ಶೆಟ್ಟಿ ಸಂಕಲಕರಿಯ, ಜಿತೇಂದ್ರ ಪೇರೂರು ಉಪಸ್ಥಿತರಿದ್ದರು.

ಟ್ರಸ್ಟಿನ ಅಧ್ಯಕ್ಷ ಹರೀಶ್ ಸಚ್ಚೇರಿಪೇಟೆ ಸ್ವಾಗತಿಸಿ ಧನ್ಯವಾದವಿತ್ತರು. ಶಿಕ್ಷಕ ಸುಧೀರ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಅಭಿನಯ ಕಲಾವಿದರು ಉಡುಪಿ ಇವರಿಂದ “ಚಿಟ್ಟೆ” ಎಂಬ ಭಾವನಾತ್ಮಕ ತುಳು ಹಾಸ್ಯಮಯ ನಾಟಕ ನಡೆಯಿತು.